ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷ ಹುದ್ದೆಗೆ ಎಂ. ಸುಧೀಂದ್ರರಾವ್ ನೇಮಕ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.
ಅಧ್ಯಕ್ಷ ಹುದ್ದೆ ನೇಮಕ ಪ್ರಶ್ನಿಸಿ ವಕೀಲ ಎಸ್.ಉಮಾಪತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಬಳಿಕ ರಾಜ್ಯ ಸರ್ಕಾರ, ಕೆಎಸ್‌ಪಿಸಿಬಿ ಮತ್ತು ಮಂಡಳಿಯ ನೂತನ ಅಧ್ಯಕ್ಷ ಎಂ. ಸುಧೀಂದ್ರರಾವ್ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ, ಅರ್ಜಿ ಸಂಬಂಧ ಎಲ್ಲ ಪ್ರತಿವಾದಿಗಳೂ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿದೆ.
ಕೆಎಸ್‌ಪಿಸಿಬಿ ಅಧ್ಯಕ್ಷರ ನೇಮಕಾತಿಗೆ ಆರು ತಿಂಗಳಲ್ಲಿ ಮಾರ್ಗಸೂಚಿ ರೂಪಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿ 2017ರ ಸೆ.22ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಹೀಗಿದ್ದೂ ರಾಜ್ಯ ಸರ್ಕಾರ ಮಾರ್ಗಸೂಚಿ ರಚಿಸದೇ ಕೆಎಸ್‌ಪಿಸಿಬಿ ಹುದ್ದೆಗೆ ಸುಧೀಂದ್ರ ರಾವ್ ಅವರನ್ನು ನೇಮಿಸಿದೆ. ಆದ್ದರಿಂದ ಸರ್ಕಾರ 2019ರ ಡಿ.30ರಂದು ಹೊರಡಿಸಿದ ಅಧಿಸೂಚನೆಗೆ ತಡೆ ನೀಡಬೇಕು. ಅಧ್ಯಕ್ಷ ಹುದ್ದೆಯ ಕರ್ತವ್ಯಗಳನ್ನು ನಿರ್ವಹಿಸದಂತೆ ಸುಧೀಂದ್ರರಾವ್ ಅವರಿಗೆ ನಿರ್ಬಂಧಿಸಬೇಕು. ಮಂಡಳಿಯ ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿಗೆ ಮಾರ್ಗಸೂಚಿ ರೂಪಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.