ಬೆಂಗಳೂರು: ಬಿಡಿಎ ಬಿಟ್ಟು ಹೋಗಲು ಮನಸ್ಸಿಲ್ಲದ ಪೊಲೀಸ್ ಸಿಬ್ಬಂದಿ ನಿಯೋಜನಾ ಅವಧಿ ಮೀರಿ ಬಿಡಿಎಯಲ್ಲಿಯೇ ಕರ್ತವ್ಯದಲ್ಲಿ ಮುಂದುವರೆಸಿದ್ದಾರೆ. ಮಾತೃ ಇಲಾಖೆಗೆ ವಾಪಸ್ ಆಗದ ಪೊಲೀಸರಿಗೆ ನೋಟಿಸ್ ಮೂಲಕ ಪೊಲೀಸ್ ಆಯುಕ್ತರು ಚಾಟಿ ಬೀಸಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಪೊಲೀಸರ ಅಗತ್ಯತೆ ಮಾತೃ ಇಲಾಖೆಗೆ ಇರುವುದರಿಂದ ಈ ನೋಟಿಸ್ ಹೊರಡಿಸಿದ್ದಾರೆ. ಮೂವರು ಹೆಡ್ ಕಾನ್ಸ್ಟೇಬಲ್, ಇಬ್ಬರು ಸಿವಿಲ್ ಹೆಡ್ ಕಾನ್ಸ್ಟೇಬಲ್, ಒಬ್ಬರು ಎಸಿಬಿಯವರು ನಿಯೋಜನೆ ಅವಧಿ ಮೀರಿ ಕೆಲಸ ಮಾಡುತ್ತಿದ್ದಾರೆ. ಅವರುಗಳು ತಕ್ಷಣವೇ ಮಾತೃ ಇಲಾಖೆಗೆ ವರದಿ ಮಾಡದಿದ್ದರೆ ಕೆಎಸ್ಪಿಡಿಪಿ ನಿಯಮಾನ್ವಯ ಶಿಸ್ತುಕ್ರಮ ಕೈಗೊಳ್ಳಲಾಗುವುದು.
ಹೀಗಾಗಿ ತಕ್ಷಣವೇ ಈ ಸಿಬ್ಬಂದಿಯನ್ನ ಬಿಡಿಎಯಿಂದ ಕಾರ್ಯಮುಕ್ತಿಗೊಳಿಸುವಂತೆ ಬಿಡಿಎ ಆಯುಕ್ತರಿಗೆ, ಪೊಲೀಸ್ ಆಯುಕ್ತರ ಕಚೇರಿಯಿಂದ ಪತ್ರ ಬರೆದಿದ್ದಾರೆ.
ಇಂದು ಸಂಜೆಯೊಳಗೆ ಇಲಾಖೆಗೆ ವಾಪಸ್ ಆಗಿ ಎಂದು ವಾರ್ನಿಂಗ್ ಕೂಡಾ ನೀಡಲಾಗಿತ್ತು. ನಾಗೇಂದ್ರ, ಮಂಜು ಸಿಆರ್, ಮಧು ಎಂಕೆ, ಎಸ್ ರಮೇಶ್, ಲಕ್ಷ್ಮಣ್, ಚಿಕ್ಕರಾಮಯ್ಯ ಎನ್ ಅವರಿಗೆ ಈ ನೋಟಿಸ್ 13 ದಿನದ ಹಿಂದೆ ಕಳುಹಿಸಿದರೂ ಕ್ಯಾರೇ ಅನ್ನದೇ ಬಿಡಿಎಯಲ್ಲೇ ಮುಂದುವರೆದಿದ್ದಾರೆ.