ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಮತ್ತು ಟೆಂಡರ್ ಶ್ಯೂರ್ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಬಿಬಿಎಂಪಿ ಆಡಳಿತಾಧಿಕಾರಿಗಳು ನಿನ್ನೆ ಸಭೆ ನಡೆಸಿ, ತ್ವರಿತವಾಗಿ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಿದರು.
ಬಿಬಿಎಂಪಿಯಿಂದ ಸುಮಾರು 68 ಪ್ರಮುಖ ರಸ್ತೆಗಳನ್ನು ವಿವಿಧ ಹಂತದಲ್ಲಿ ವೈಟ್ ಟಾಪಿಂಗ್ ಯೋಜನೆ ಅಡಿ ಅಭಿವೃದ್ಧಿಪಡಿಸಲು ಹಾಗೂ 08 ರಸ್ತೆಗಳಲ್ಲಿ ಟೆಂಡರ್ ಶ್ಯೂರ್ ಮಾದರಿಯಡಿ ಅಭಿವೃದ್ಧಿಪಡಿಸುವ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಾಗಾಗಿ ಸಾರ್ವಜನಿಕರ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ತ್ವರಿತವಾಗಿ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳು ಸೂಚಿಸಿದರು.
ಯಾವ ರಸ್ತೆಗಳಲ್ಲಿ ಎಷ್ಟು ಕಾಮಗಾರಿ ಮುಗಿದಿದೆ, ಎಷ್ಟು ಬಾಕಿಯಿದೆ, ಸುಗಮ ಸಂಚಾರಕ್ಕೆ ಯೋಗ್ಯವಾಗಿದೆಯೇ?, ಸ್ಥಳೀಯವಾಗಿ ಏನು ಸಮಸ್ಯೆಗಳಿವೆ ಎಂಬ ಮಾಹಿತಿಯನ್ನು ಪಡೆದುಕೊಂಡರು. ಹೊರವರ್ತುಲ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ಕಡೆ ಸರ್ವೀಸ್ ರಸ್ತೆ, ಪಾದಚಾರಿ ಮಾರ್ಗ ಹಾಗೂ ಮೀಡಿಯನ್ಸ್ಗಳನ್ನು ಅಭಿವೃದ್ಧಿಪಡಿಸುವ ಅಂಶವೂ ಒಳಗೊಂಡಿದೆ. ಈ ಕಾಮಗಾರಿಗಳು ವಿಳಂಬವಾಗಿರುವ ಬಗ್ಗೆ ಮಾತನಾಡಿ, ಕೂಡಲೇ ಕಾಮಗಾರಿಗಳನ್ನು ಪ್ರಾರಂಭಿಸಿ ಸಮರ್ಪಕವಾಗಿ ನಿರ್ವಹಣೆ ಮಾಡಲು ಸೂಚಿಸಿದರು.
ಟೆಂಡರ್ ಶ್ಯೂರ್ ಕಾಮಗಾರಿ ತ್ವರಿತವಾಗಿ ಮುಗಿಸಲು ಸೂಚನೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಸ್ತುತ 08 ಪ್ರಮುಖ ರಸ್ತೆಗಳಲ್ಲಿ ಟೆಂಡರ್ ಶ್ಯೂರ್ ಮಾದರಿಯಡಿ ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಸಂಬಂಧ ಯಾವ ರಸ್ತೆಗಳಲ್ಲಿ ಯುಟಿಲಿಟಿ ಸ್ಥಳಾಂತರದ ತೊಡಕುಗಳಿವೆ ಹಾಗೂ ಮುಂತಾದ ವಿಷಯಗಳ ಬಗ್ಗೆ ವಿಸ್ತೃತ ವರದಿ ಸಿದ್ಧಪಸಿಕೊಂಡು ನಿಗದಿತ ಸಮಯದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆಡಳಿತಾಧಿಕಾರಿಗಳು ಸೂಚನೆ ನೀಡಿದರು.
ಈ ವೇಳೆ ಯೋಜನಾ ವಿಭಾಗದ ಮುಖ್ಯ ಅಭಿಯಂತರರು ರಮೇಶ್ ಮಾತನಾಡಿ, ನಗರದಲ್ಲಿ 41 ರಸ್ತೆಗಳಲ್ಲಿ ಟೆಂಡರ್ ಶ್ಯೂರ್ ಕಾಮಗಾರಿ ಕೈಗೆತ್ತಿಕೊಂಡಿದ್ದು, ಅದರಲ್ಲಿ ಈಗಾಗಲೇ 33 ರಸ್ತೆಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇನ್ನೂ 8 ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮವಹಿಸುವುದಾಗಿ ತಿಳಿಸಿದರು.