ಬೆಂಗಳೂರು: ದೀಪಾವಳಿ ಹಿನ್ನೆಲೆ ಆರೋಗ್ಯ ಇಲಾಖೆಯಿಂದ ಪಟಾಕಿ ಬಗ್ಗೆ ಮುಂಜಾಗ್ರತಾ ಕ್ರಮದ ಬಗ್ಗೆ ಇಂದು ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆಯಿಂದ ಮಾಧ್ಯಮಗೋಷ್ಟಿ ನಡೆಯಿತು.
ಇದೇ ವೇಳೆ ಆರೋಗ್ಯ ಇಲಾಖೆ ಹಸಿರು ಪಟಾಕಿ ಕುರಿತು ಮಾರಾಟಕ್ಕೆ ಮಾತ್ರ ಅವಕಾಶ ಇದ್ದು, ಹಸಿರು ಪಟಾಕಿ ಖರೀದಿಸಿ ದೀಪಾವಳಿ ಆಚರಿಸಲು ಸೂಚನೆ ನೀಡಿದೆ.
ಹಸಿರು ಪಟಾಕಿ ಪರಿಸರಕ್ಕೆ ಹಾನಿ ಉಂಟು ಮಾಡುವುದಿಲ್ಲ, ಹೀಗಾಗಿ ಪಟಾಕಿಯಿಂದ ವಾಯು ಮಾಲಿನ್ಯ ಉಂಟಾಗುವುದಿಲ್ಲ. NEERI ಲ್ಯಾಬ್ ಫಾರ್ಮುಲಾದ ಪ್ರಕಾರ ಈ ಹಸಿರು ಪಟಾಕಿ ತಯಾರಿಸಲಾಗುತ್ತದೆ. ಇದಕ್ಕೆ ಪೆಟ್ರೋಲಿಯಂ ಅಂಡ್ ಎಕ್ಸಪ್ಲೋಸಿವ್ ಸೇಫ್ಟಿ ಆರ್ಗನೈಸೇಷನ್ ಪ್ರಮಾಣೀಕರಣ ನೀಡಿದ್ದು, ಗ್ರಾಹಕರು ಹಸಿರು ಪಟಾಕಿ ಖರೀದಿಸುವಾಗ ಎಚ್ಚರಿಕೆ ವಹಿಸಬೇಕು. ಯಾಕಂದ್ರೆ ಹಸಿರು ಪಟಾಕಿ ಬಾಕ್ಸ್ ಮೇಲೆ NEERI ಮತ್ತು PESO ಲಾಂಛನ ಇರುತ್ತದೆ. ಬಾಕ್ಸ್ ಮೇಲಿನ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಪರೀಕ್ಷಿಸಬಹುದು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಹಸಿರು ಪಟಾಕಿ ಅಂದ್ರೆ ಏನು?
ಹಸಿರು ಪಟಾಕಿ ಅಂದ್ರೆ ಸಾಮಾನ್ಯ ಪಟಾಕಿಗಿಂತ ಕಡಿಮೆ ಮಾಲಿನ್ಯ ಉಂಟುಮಾಡುವ ಪಟಾಕಿಯಾಗಿದ್ದು, CSIR ಮತ್ತು NEERI ಸಂಶೋಧನಾ ಸಂಸ್ಥೆಗಳು ಜಂಟಿಯಾಗಿ ಹಸಿರು ಪಟಾಕಿ ಅಭಿವೃದ್ಧಿ ಪಡಿಸಿವೆ. ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆ 2018ರಲ್ಲಿ ಹಸಿರು ಪಟಾಕಿ ಅಭಿವೃದ್ಧಿ ತಯಾರಿ ಹೆಚ್ಚುಮಾಡಲಾಗುತ್ತಿದೆ. ಲೀಥಿಯಂ, ಲೆಡ್ (ಸೀಸ), ಆರ್ಸೆನಿಕ್ ಹಾನಿಕಾರಕ ಕಮಿಕಲ್ಗಳನ್ನು ಹಸಿರು ಪಟಾಕಿಯಲ್ಲಿ ಬಳಸುವುದಿಲ್ಲ. ಹಸಿರು ಪಟಾಕಿಯು ಕಡಿಮೆ ಹೊಗೆ ಹೊರಸೂಸುತ್ತವೆ. ಅಲ್ಲದೆ ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ ಶೇ.30ರಷ್ಟು ಮಾತ್ರ ಮಾಲಿನ್ಯ ಉಂಟುಮಾಡುತ್ತವೆ.