ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧದ ಹಲಗೇವಡೇರಹಳ್ಳಿ ಅಕ್ರಮ ಡಿ ನೋಟಿಫಿಕೇಷನ್ ಆರೋಪ ಪ್ರಕರಣದ ವಿಚಾರಣೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಪ್ರತಿವಾದಿಗಳಾದ ಲೋಕಾಯುಕ್ತ ಪೊಲೀಸ್ ಹಾಗು ದೂರುದಾರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಹಲಗೇವಡೇರಹಳ್ಳಿ ಅಕ್ರಮ ಡಿ ನೋಟಿಫಿಕೇಷನ್ ಆರೋಪ ಪ್ರಕರಣದಲ್ಲಿ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿ ದಾಖಲಿಸಲಾಗಿದ್ದ ಪ್ರಕರಣ ರದ್ದುಕೋರಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಪಿ.ಎಸ್ ದಿನೇಶ್ ಕುಮಾರ್ ಅವರಿದ್ದ ಹೈಕೋರ್ಟ್ ಏಕ ಸದಸ್ಯಪೀಠದಲ್ಲಿ ನಡೆಯಿತು. ಕುಮಾರಸ್ವಾಮಿ ಅವರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿಗಳಿಗೆ ಕಾಲಾವಕಾಶ ನೀಡಿ ವಿಚಾರಣೆಯನ್ನು ಅಕ್ಟೋಬರ್ 1 ಕ್ಕೆ ಮುಂದೂಡಿಕೆ ಮಾಡಲಾಗಿದೆ.
ಬನಶಂಕರಿ 5ನೇ ಹಂತದ ಹಲಗೆವಡೇರಹಳ್ಳಿಯ 3ಎಕರೆ 34 ಗುಂಟೆ ಜಮೀನು ಅಕ್ರಮ ಡಿನೋಟಿಫಿಕೇಶನ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ
ಅಕ್ಟೋಬರ್ 4ರಂದು ಕೋರ್ಟ್ ಮುಂದೆ ಖುದ್ದು ಹಾಜರಾಗಲು ಜನಪ್ರತಿನಿಧಿ ಕೋರ್ಟ್, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ಸಮನ್ಸ್ ನೀಡಿತ್ತು.ಇದನ್ನ ಪ್ರಶ್ನಿಸಿ ಕುಮಾರಸ್ವಾಮಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಪ್ರಕರಣದ ಹಿನ್ನಲೆ:
2012 ರಲ್ಲಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿ, ಚಾಮರಾಜನಗರ ಮೂಲದ ರೈತ ಮಹದೇವಸ್ವಾಮಿ ಜನಪ್ರತಿನಿಧಿಗಳ ವಿಶೇಷ ನ್ಯಾಯಲಯಕ್ಕೆ ಜುಲೈ 20 ರಂದು ದೂರು ನೀಡಿದ್ದರು. ಆಗ ವಿಚಾರಣೆ ನಡೆಸಿದ್ದ ನ್ಯಾಯಾಲಯ ಬಿ ರಿಪೋರ್ಟ್ ವಜಾಗೊಳಿಸಿ, ವಿಚಾರಣೆ ಕೈ ಗೆತ್ತಿಕೊಳ್ಳುವುದಾಗಿ ಆದೇಶಿಸಿತ್ತು.
2006 ರಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕಾನೂನು ಬಾಹಿರವಾಗಿ ಹಲಗೆವಡೇರಹಳ್ಳಿ ಬಳಿ ಸರ್ವೇ ನಂಬರ್ 128, 130 ರಲ್ಲಿ 2.24 ಎಕರೆ ಭೂಮಿಯನ್ನು ಡಿನೊಟೀಫಿಕೇಷನ್ ಮಾಡಿದ್ದರು. ಈ ಸಂಬಂಧ ಮಹದೇವಸ್ವಾಮಿ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು. ನಂತರ 2012 ರಲ್ಲಿ ಈ ಬಗ್ಗೆ ಲೋಕಾಯುಕ್ತ ಪ್ರಕರಣ ದಾಖಲಿಸಲಾಗಿತ್ತು. ಲೋಕಾಯುಕ್ತ ಈ ಬಗ್ಗೆ 2018 ರಲ್ಲಿ ಬಿ ರಿಪೋರ್ಟ್ ಸಲ್ಲಿಸಿತ್ತು,ಇದನ್ನು ಪ್ರಶ್ನಿಸಿ ಕೋರ್ಟ್ಗೆ ದೂರುದಾರ ಖಾಸಗಿ ದೂರು ನೀಡಿದ್ದರು.