ಬೆಂಗಳೂರು: ಕಾರ್, ಅಥವಾ ಇನ್ಯಾವುದೇ ವಾಹನ ನೋಂದಣಿಗೂ ಮೊದಲು ಮಾಲೀಕರು ಪಾರ್ಕಿಂಗ್ ಸ್ಥಳಾವಕಾಶದ ದೃಢೀಕರಣ ಪತ್ರವನ್ನು ಬಿಬಿಎಂಪಿಯಿಂದ ಪಡೆಯಬೇಕು ಎಂಬ ನಿಯಮಕ್ಕೆ ಸಾರಿಗೆ ಇಲಾಖೆ ಸ್ಪಷ್ಟನೆ ನೀಡಿದೆ.
ಈ ಆದೇಶ 2020 ಕ್ಕೆ ಜಾರಿಗೆ ಬರಲಿದೆ ಎಂಬ ವಿಚಾರ ಕೇವಲ ವದಂತಿ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ. ನಗರ ಭೂ ಸಾರಿಗೆ, ಬಿಎಂಆರ್ಸಿಎಲ್ ಹಾಗೂ ಮೂಲಸೌಕರ್ಯ ಅಭಿವೃದ್ಧಿ ನಿಗಮ ಸಹಯೋಗದಲ್ಲಿ ಸಮಗ್ರ ಸಂಚಾರ ಯೋಜನೆಯ ಕರಡು ರೂಪುಗೊಂಡಿದೆ. ಇದರಲ್ಲಿ ಈ ಪಾರ್ಕಿಂಗ್ ದೃಢೀಕರಣದ ಶಿಫಾರಸ್ಸು ಕೂಡಾ ಇದೆ.
ವಸತಿ ಪ್ರದೇಶಗಳ ರಸ್ತೆಗಳಲ್ಲಿ ಕಾರು ನಿಲುಗಡೆಗೊಳಿಸುವುದರಿಂದ ಸಂಚಾರಿ ದಟ್ಟಣೆಗೆ ಕಾರಣವಾಗುತ್ತದೆ. ಹೀಗಾಗಿ ವಾಹನ ನಿಲುಗಡೆಗೆ ಸ್ಥಳಾವಕಾಶ ಲಭ್ಯ ಇರುವ ಬಗ್ಗೆ ದೃಢೀಕರಣ ಪತ್ರ ಕೊಟ್ಟರಷ್ಟೇ ಹೊಸ ವಾಹನದ ನೋಂದಣಿ ಮಾಡಿಕೊಡಬೇಕು ಎಂಬ ಶಿಫಾರಸ್ಸು ಈ ಹೊಸ ಆದೇಶದಲ್ಲಿದೆ.