ಬೆಂಗಳೂರು: ದಿನೇ ದಿನೇ ಸೋಂಕು ಹೆಚ್ಚಾಗ್ತಿದ್ದು ಪರಿಸ್ಥಿತಿ ಊಹೆಗೂ ಮೀರಿ ಹೋಗುತ್ತಿದೆ. ಕೋವಿಡ್ ಭಯಕ್ಕೆ ಇತ್ತ ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಕೆಲವು ಲಸಿಕಾ ಕೇಂದ್ರಗಳಲ್ಲಿ 'Not available' ಎಂಬ ಬೋರ್ಡ್ ಕಾಣುತ್ತಿದೆ. ಇದರಿಂದ ಲಸಿಕೆ ಹಾಕಿಸಿಕೊಳ್ಳಬೇಕು ಅಂತ ಹೋದವರು ನಿರಾಸೆಯಿಂದ ವಾಪಸ್ಸು ಆಗುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆ ಮಾತ್ರವಲ್ಲದೇ ಖಾಸಗಿ ಆಸ್ಪತ್ರೆಯಲ್ಲೂ ಲಸಿಕೆ ಸ್ಟಾಕ್ ಇಲ್ಲ.
ಕೋವಿಡ್ ಲಸಿಕೆ ಕೊರತೆ ಹಿನ್ನೆಲೆ ಜನ ಸಾಮಾನ್ಯರು ವಿಷ್ಯ ತಿಳಿಯದೇ ಅಲೆದಾಟ ಮುಂದುವರೆದಿದೆ. ಇತ್ತ ಸರ್ಕಾರವೂ ಸರಿಯಾದ ರೀತಿಯಲ್ಲಿ ವಿತರಣೆ ಮಾಡದ ಕಾರಣ ಲಸಿಕೆ ನೀಡುವುದನ್ನೇ ಕೇಂದ್ರದಲ್ಲಿ ಸ್ಥಗಿತಗೊಳಿಸಲಾಗಿದೆ. ಇನ್ನು ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕಾಭಿಯಾನ ಶುರುವಾಗುತ್ತೆ ಅನ್ನೋದು ದೂರದ ಮಾತಾಗಿದೆ. ಇತ್ತ ಕೇಂದ್ರ ಸರ್ಕಾರದಿಂದ 4 ಲಕ್ಷ ಲಸಿಕೆ ಪೂರೈಕೆ ಆಗಲಿದೆ, ಯಾವುದೇ ಕೊರತೆ ಇಲ್ಲ ಅಂತ ಸಚಿವರು ಹೇಳಿದ್ದರೂ ಸಹ ಸರಿಯಾದ ರೀತಿಯಲ್ಲಿ ಲಸಿಕೆ ಲಭ್ಯತೆ ಇಲ್ಲದೇ ಇರುವುದು ಕಾಣಬಹುದು.
ರಾಜ್ಯಾದ್ಯಂತ ಕೊರೊನಾ ಲಸಿಕಾ ಅಭಿಯಾನದಲ್ಲಿ ಈವರೆಗೆ 93,63,124 ಮಂದಿ ಪಡೆದಿದ್ದಾರೆ. ಇದರಲ್ಲಿ 6,74,501 ಆರೋಗ್ಯ ಕಾರ್ಯಕರ್ತರು ಮೊದಲನೇ ಡೋಸ್ ಹಾಗೂ 4,26,884 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಇನ್ನು 3,67,845 ಮುಂಚೂಣಿ ಕಾರ್ಯತರು ಮೊದಲನೇ ಡೋಸ್ ಹಾಗೂ 1,42,133 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 34,57,326 ಹಿರಿಯ ನಾಗರಿಕರು ಮೊದಲ ಡೋಸ್ ಹಾಗೂ 6,50,059 ಎರಡನೇ ಡೋಸ್ ಪೂರ್ಣಗೊಳಿಸಿದ್ದಾರೆ. ಅನಾರೋಗ್ಯ ಸಮಸ್ಯೆಯಿಂದ ಬಳುತ್ತಿರುವ 34,17,147 ಮಂದಿ ಮೊದಲ ಡೋಸ್ ಮತ್ತು 2,27,229 ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.