ಬೆಂಗಳೂರು: ನಗರ ಈಶಾನ್ಯ ವಿಭಾಗದಲ್ಲಿ ಹೆಚ್ಚಾಗುತ್ತಿರುವ ಅಪರಾಧ ಪ್ರಕರಣಗಳನ್ನು ಮಟ್ಟಹಾಕುವ ನಿಟ್ಟಿನಲ್ಲಿ ಡಿಸಿಪಿ ಡಾ.ಭೀಮಾಶಂಕರ್ ಗುಳೇದ್ ಅವರು ರೌಡಿಗಳ ಪರೇಡ್ ನಡೆಸಿದರು.
ಯಲಹಂಕದ ಹೊಯ್ಸಳ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪರೇಡ್ ನಲ್ಲಿ 11 ಠಾಣಾ ವ್ಯಾಪ್ತಿಗಳಿಂದ 230 ರೌಡಿಗಳು ಹಾಜರಾಗಿದ್ದರು. ಭೂ ಮಾಫಿಯಾ, ರೌಡಿ ಚಟುವಟಿಕೆ ಹಾಗೂ ಗುಂಪುಗಾರಿಕೆ ನಡೆಸುತ್ತಿರುವ ಮಾಹಿತಿಯಿದೆ. ಇತ್ತೀಚೆಗೆ ರೌಡಿಶೀಟರ್ ದಿಲೀಪ್ ನನ್ನು ಮತ್ತೊಬ್ಬ ರೌಡಿಶೀಟರ್ ಕೊಲೆ ಮಾಡಿದ್ದಾನೆ. ಈ ಮೂಲಕ ರೌಡಿ ಚಟುವಟಿಕೆ ಜಾಸ್ತಿ ಆಗಿದೆ. ಇನ್ಮುಂದೆ ಹೀಗೆಲ್ಲ ನಡೆದರೆ ಸರಿ ಇರುವುದಿಲ್ಲ. ಸಮಾಜದ ಸಾರ್ವಜನಿಕರ ಕಟ್ಟುಪಾಡುಗಳಿಗೆ ಕಟಿಬದ್ಧರಾಗಿ ಜೀವನ ನಡೆಸಿ. ಇಲ್ಲ ಅಂದರೆ ನಮ್ಮ ಕೆಲಸ ನಾವು ಮಾಡಬೇಕಾಗುತ್ತದೆ ಎಂದು ಡಿಸಿಪಿ ಗುಳೇದ್ ರೌಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಕಳೆದ ಮಂಗಳವಾರ ನಡೆದ ಸಭೆಯಲ್ಲಿ ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದು, ಕಡಿವಾಣ ಹಾಕುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ನಗರ ಪೊಲೀಸರಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈಶಾನ್ಯ ವಿಭಾಗದ ಪೊಲೀಸರು ರೌಡಿ ಪರೇಡ್ ನಡೆಸಿದರು.