ಬೆಂಗಳೂರು: ಇನ್ನೊಂದು ಜೀವಕ್ಕೆ ಜೀವ ಕೊಡುವ ಹೆರಿಗೆ ಪ್ರಕ್ರಿಯೆಯು ಒಂದು ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ಹೆಣ್ಣು ತನ್ನ ಜೀವನದಲ್ಲೇ ಸಾರ್ಥಕತೆ ಭಾವನೆ ಹೊಂದುವ ಸಮಯವದು. ಆದ್ರೆ ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಆವಿಷ್ಕಾರಗಳಿಂದ ಇಂದು ಅದೆಷ್ಟೂ ಹೆಣ್ಣು ಜೀವಗಳು ಸಿಸೇರಿಯನ್ ಅಥವಾ ಸಿ-ಸೆಕ್ಷನ್ ಪ್ರಸವ ಪ್ರಕ್ರಿಯೆಗೆ ಮೊರೆ ಹೋಗುತ್ತಿದ್ದಾರೆ. ಸಾಮಾನ್ಯ ಹೆರಿಗೆಗೆ ಅವಕಾಶಗಳಿದ್ದರೂ ಕೂಡ ಸಿಸೇರಿಯನ್ ಪ್ರಸವಕ್ಕೆ ಆದ್ಯತೆ ಕೊಡುತ್ತಿದ್ದಾರೆ. ಆದ್ರೆ ಸಿಲಿಕಾನ್ ಸಿಟಿಯಲ್ಲಿ ಮಾತ್ರ ಸಿಸೇರಿಯನ್ ಹೆರಿಗೆಗಿಂತ ಸಾಮಾನ್ಯ ಹೆರಿಗೆ ಪ್ರಮಾಣವೇ ಜಾಸ್ತಿ ಎಂದು ತಿಳಿದುಬಂದಿದೆ.
ನಗರದ ಪ್ರತಿಷ್ಠಿತ ಹೆರಿಗೆ ಆಸ್ಪತ್ರೆಗಳಲ್ಲಿ ಮೊದಲ ಸ್ಥಾನವನ್ನು ವಾಣಿವಿಲಾಸ್ ಆಸ್ಪತ್ರೆ ಪಡೆದಿದ್ದು, ಪ್ರತಿ ತಿಂಗಳು ಇಲ್ಲಿ 1 ಸಾವಿರಕ್ಕೂ ಅಧಿಕ ಹೆರಿಗೆ ಮಾಡಿಸಲಾಗುತ್ತದೆ. ಬೆಂಗಳೂರು ಮಾತ್ರವಲ್ಲದೆ ಬೇರೆ ಜಿಲ್ಲೆಗಳಿಂದ ಹಿಡಿದು ಹೊರ ರಾಜ್ಯಗಳಿಂದಲೂ ರೋಗಿಗಳು ಇಲ್ಲಿ ಬಂದು ಚಿಕಿತ್ಸೆ ಪಡೆಯುತ್ತಾರೆ. ವಾಣಿವಿಲಾಸ್ ಆಸ್ಪತ್ರೆಯ ಸಾಮಾನ್ಯ ಹೆರಿಗೆ ಹಾಗೂ ಸಿ-ಸೆಕ್ಷನ್ ಹೆರಿಗೆ ಪ್ರಮಾಣ ನೋಡುವುದಾದರೆ,
ವಾಣಿವಿಲಾಸ್ ಆಸ್ಪತ್ರೆ- ಡಿಸೆಂಬರ್ -2020:
- ಸಾಮಾನ್ಯ ಹೆರಿಗೆ- 762
- ಸಿ-ಸೆಕ್ಷನ್(ಸಿಸೇರಿಯನ್)- 526
- ಒಟ್ಟು ಹೆರಿಗೆಗಳು- 1,288
ಜನವರಿ- 2021:
- ಸಾಮಾನ್ಯ ಹೆರಿಗೆ- 679
- ಸಿ-ಸೆಕ್ಷನ್(ಸಿಸೇರಿಯನ್)- 485
- ಒಟ್ಟು- 1,164
ವಾಣಿವಿಲಾಸ್ ಆಸ್ಪತ್ರೆಯ ಅಂಕಿ ಅಂಶಗಳ ಪ್ರಕಾರ, ಹೆಚ್ಚು ಸಾಮಾನ್ಯ ಹೆರಿಗೆ ಆಗಿರುವುದು ಕಂಡು ಬಂದಿದೆ.
ಇನ್ನು ನಗರದ ಕೆ.ಸಿ. ಜನರಲ್ ಆಸ್ಪತ್ರೆ ಹೆರಿಗೆ ಚಿಕಿತ್ಸೆಗೆ ಹೆಚ್ಚು ಹೆಸರು ಮಾಡಿದ್ದು, ಎಲ್ಲ ವರ್ಗದ ಜನರು ಆಗಮಿಸುತ್ತಾರೆ. ಇಲ್ಲಿನ ಹೆರಿಗೆ ಪ್ರಮಾಣ ನೋಡುವುದಾದರೆ,
ಡಿಸೆಂಬರ್-2020:
- ಸಾಮಾನ್ಯ ಹೆರಿಗೆ- 117
- ಸಿ ಸೆಕ್ಷನ್ ಹೆರಿಗೆ- 132
ಜನವರಿ- 2021:
- ಸಾಮಾನ್ಯ ಹೆರಿಗೆ- 98
- ಸಿ ಸೆಕ್ಷನ್ ಹೆರಿಗೆ- 125
ಸಿಸೇರಿಯನ್ ಹೆರಿಗೆ ಪ್ರಮಾಣ ಶೇ. 56ರಷ್ಟು ಇದ್ದರೆ, ಸಾಮಾನ್ಯ ಹೆರಿಗೆ ಪ್ರಮಾಣ ಶೇ. 53ರಷ್ಟು ಇದೆ.
ಸಿ-ಸೆಕ್ಷನ್ ಆಡಿಟಿಂಗ್ ಶುರು ಮಾಡಿದ್ದ ಆರೋಗ್ಯ ಇಲಾಖೆ:
2019ರಲ್ಲಿ ಆರೋಗ್ಯ ಇಲಾಖೆಯು ಸಿ-ಸೆಕ್ಷನ್ ಸಂಬಂಧ ಆಡಿಟಿಂಗ್ ಮಾಡಿತ್ತು. ಈ ಮೂಲಕ ಸಿಜೇರಿಯನ್ ಹೆರಿಗೆಗೆ ಕಾರಣ ಏನು?, ಅದನ್ನು ಕಡಿಮೆ ಮಾಡಲು ಯಾವೆಲ್ಲ ಕ್ರಮ ಕೈಗೊಳ್ಳಬಹುದು ಎಂಬುದರ ಮಾಹಿತಿ ಸಂಗ್ರಹಿಸುವ ಕೆಲಸಕ್ಕೆ ಮುಂದಾಗಿತ್ತು. ಇನ್ನು ಸಿಸೇರಿಯನ್ ಅವಶ್ಯಕತೆ ಇಲ್ಲದೇ ಇದ್ದರೂ ಅದಕ್ಕೆ ಒತ್ತಾಯ ಮಾಡುವ ಆಸ್ಪತ್ರೆಯ ವಿರುದ್ಧ ದೂರು ಕೊಡುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಈಗಲೂ ಅದು ಜಾರಿಯಲ್ಲಿದೆ.
ಸಿಸೇರಿಯನ್ ಯಾರಿಗೆ ಅವಶ್ಯಕ?
ತಾಯಿ ಅಥವಾ ಮಗುವಿನ ಪೈಕಿ ಯಾರಿಗಾದರೂ ಅಪಾಯವಿದ್ದ ಸಂದರ್ಭದಲ್ಲಿ, ತುರ್ತು ಪರಿಸ್ಥಿತಿ ವೇಳೆ, ಅಗತ್ಯ ಬಿದ್ದ ವೇಳೆ ಮಾತ್ರ ಸಿಸೇರಿಯನ್ ಮಾಡಬೇಕು. ಆದರೆ ಹಣದಾಸೆಗೆ ಬೀಳುವ ಆಸ್ಪತ್ರೆಗಳು ಸಾಮಾನ್ಯ ಹೆರಿಗೆ ಬದಲು ಸಿಸೇರಿಯನ್ ಮಾಡಲು ಮುಂದಾಗುತ್ತವೆ.
ಸಿಜೇರಿಯನ್ ಹೆರಿಗೆಗೆ ಒತ್ತಾಯ:
ಇನ್ನೂ ನೋವು ತಾಳಲಾರದೆ ಸಿಸೇರಿಯನ್ ಹೆರಿಗೆಗೆ ಮೊರೆ ಹೋಗುವ ಮಹಿಳೆಯರ ಸಂಖ್ಯೆಯೂ ಕಡಿಮೆಯೇನಿಲ್ಲ. ಸಿಸೇರಿಯನ್ಗಾಗಿ ಆಸ್ಪತ್ರೆಗಳು ಮಾತ್ರ ಪೈಪೋಟಿ ಬಿದ್ದಿಲ್ಲ, ಬದಲಿಗೆ ಜನರು ಕೂಡ ಸಿಸೇರಿಯನ್ಗಾಗಿ ವೈದ್ಯರನ್ನು ಪೀಡಿಸೋದು ಕೂಡ ಇದೆ. ಇದಕ್ಕೆ ಕಾರಣ ಹುಡುಕುತ್ತಾ ಹೊರಟ್ರೆ, ಹೆರಿಗೆ ವೇಳೆ ಪೋಷಕರ-ಸಂಬಂಧಿಕರ ಟೆನ್ಷನ್, ಜ್ಯೋತಿಷ್ಯದ ಪ್ರಕಾರ ಯೋಚನೆ-ನಿಗದಿತ ಸಮಯಕ್ಕೆ ಹೆರಿಗೆ ಆಗಬೇಕು ಎಂಬ ಹಂಬಲ, ಹೆರಿಗೆ ನೋವು ತಾಳಲಾರದ ಮಹಿಳೆಯರ ಮನಸ್ಥಿತಿ ಕೂಡ ಇದಕ್ಕೆ ಕಾರಣವಾಗಿದೆ.
ಈ ಹಿಂದಿನ ಅಂಕಿ-ಅಂಶಗಳು ಹೇಳುವುದೇನು?
ಸರ್ಕಾರಿ ಆಸ್ಪತ್ರೆ(ರಾಜ್ಯ ಮಟ್ಟ):
- 2017-2018ರಲ್ಲಿ- 4,46,783 ಸಾಮಾನ್ಯ ಹೆರಿಗೆ, 1,23,144 ಸಿಸೇರಿಯನ್ ಹೆರಿಗೆ
- 2018-2019ರಲ್ಲಿ- 4,27,305 ಸಾಮಾನ್ಯ ಹೆರಿಗೆ, 1,37,244 ಸಿಸೇರಿಯನ್ ಹೆರಿಗೆ
ಖಾಸಗಿ ಆಸ್ಪತ್ರೆ(ರಾಜ್ಯ ಮಟ್ಟ)
- 2017-2018ರಲ್ಲಿ- 2,07,753 ಸಾಮಾನ್ಯ ಹೆರಿಗೆ, 1,33,139 ಸಿಸೇರಿಯನ್ ಹೆರಿಗೆ
- 2018-2019ರಲ್ಲಿ- 2,03,337 ಸಾಮಾನ್ಯ ಹೆರಿಗೆ, 1,42,641 ಸಿಸೇರಿಯನ್ ಹೆರಿಗೆ
ಇದನ್ನೂ ಓದಿ: ಸಿಸೇರಿಯನ್ ಶಸ್ತ್ರ ಚಿಕಿತ್ಸೆಗೆ ಮೊರೆ ಹೋಗುತ್ತಿರುವ ಗರ್ಭಿಣಿಯರು : ಕಾರಣ?
ಖಾಸಗಿ ಆಸ್ಪತ್ರೆ ಹೊರತು ಪಡಿಸಿ ಸರ್ಕಾರಿ ಆಸ್ಪತ್ರೆಯಲ್ಲೂ ಸಿಸೇರಿಯನ್ ಹೆರಿಗೆ ನಡೆದಿದೆ. ಅದರೆ ಸಾಮಾನ್ಯ ಹೆರಿಗೆ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಸಿಸೇರಿಯನ್ ಹೆರಿಗೆ ಕಡಿಮೆ ಇರುವುದು ಕಂಡು ಬಂದಿದೆ.