ಬೆಂಗಳೂರು: ಆರ್.ಆರ್.ನಗರ ಉಪಚುನಾವಣೆಗೆ ಮೂರು ಪಕ್ಷಗಳ ಘಟಾನುಘಟಿಗಳು ಈಗಾಗಲೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬಿಜೆಪಿಯಿಂದ ಮುನಿರತ್ನ, ಕಾಂಗ್ರೆಸ್‌ನಿಂದ ಕುಸುಮ.ಹೆಚ್., ಜೆಡಿಎಸ್‌ನಿಂದ ಕೃಷ್ಣ ಮೂರ್ತಿ ಅಖಾಡಕ್ಕೆ ಇಳಿದಿದ್ದಾರೆ. ಚುನಾವಣೆಯಲ್ಲಿ ಗೆದ್ದೇ ಗೆಲ್ಲಬೇಕೆಂದು ಪಣತೊಟ್ಟಿರುವ ಪಕ್ಷಗಳು ತಮ್ಮ ಅಭ್ಯರ್ಥಿಗಳ ಜೊತೆ ಪ್ರಚಾರ ಶುರು ಮಾಡಿವೆ.
ಆರ್ ಆರ್ ನಗರ ವ್ಯಾಪ್ತಿಯಲ್ಲಿ ಪೊಲೀಸ್ ಸಿಬ್ಬಂದಿ ನೇಮಕ ಮತ ಪ್ರಚಾರದ ಭರಾಟೆಯಲ್ಲಿ ಮತದಾರರನ್ನು ಸೆಳೆಯಲು ಹಣ, ಹೆಂಡ, ಸೀರೆ, ಅಥವಾ ಬೇರೆ ಬೇರೆ ರೀತಿಯ ಆಮಿಷವೊಡ್ಡುವ ಸಾಧ್ಯತೆ ಇರುತ್ತದೆ. ಈ ಹಿಂದೆಯೂ ಕೂಡ ಆರ್. ಆರ್. ನಗರ ವ್ಯಾಪ್ತಿಯಲ್ಲಿ ನಕಲಿ ವೋಟರ್ ಐಡಿ, ಸೀರೆಗಳು ಪತ್ತೆಯಾಗಿದ್ದವು. ಈ ಬಾರಿಯ ಚುನಾವಣೆ ವೇಳೆ ಕಳೆದ ರೀತಿಯ ಯಾವುದೇ ಘಟನೆಗಳು ನಡೆಯಬಾರದು ಎಂಬ ಕಾರಣಕ್ಕಾಗಿ ಈಗಾಗಲೇ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರ ಸೂಚನೆಯಂತೆ ಆರ್.ಆರ್.ನಗರ ವ್ಯಾಪ್ತಿಯ ಎಲ್ಲಾ ಸಿಬ್ಬಂದಿ ಅಲರ್ಟ್ ಆಗಿರುವಂತೆ ಸೂಚಿಸಿದ್ದಾರೆ.ಅಷ್ಟು ಮಾತ್ರವಲ್ಲದೇ, ಈಗಾಗಲೇ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರತಿಯೊಂದು ಸೂಕ್ಷ್ಮ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ಗಳನ್ನು ಹಾಕಿ ಅನುಮಾನಸ್ಪದ ವಾಹನಗಳು, ವ್ಯಕ್ತಿಗಳು, ಸಂಶಯಾಸ್ಪದ ವಸ್ತುಗಳು, ಗೂಡ್ಸ್ ವಾಹನಗಳು ಪತ್ತೆಯಾದರೆ ಅಂತಹ ವಾಹನಗಳನ್ನು ತಡೆದು ತಪಾಸಣೆ ಮಾಡಲು ಕೂಡ ಪೊಲೀಸರು ಮುಂದಾಗಿದ್ದಾರೆ.
ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಸಬ್ ಇನ್ಸ್‌ಪೆಕ್ಟರ್ , ಹೆಡ್ ಕಾನ್‌ಸ್ಟೆಬಲ್ ಮಹಿಳಾ ಸಿಬ್ಬಂದಿಗಳು ಬ್ಯಾರಿಕೆಡ್ಗಳನ್ನು ಹಾಕಿ ಆರ್. ಆರ್ ನಗರದಲ್ಲಿ ಸಂಪೂರ್ಣ ಕಟ್ಟೆಚ್ಚರ ವಹಿಸಿದ್ದಾರೆ. ಪೊಲೀಸರ ಜೊತೆಗೆ ಗುಪ್ತಚರ ಇಲಾಖೆ ಕೂಡ ಕೈಜೋಡಿಸಿದೆ.