ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರ ನಾಮ ನಿರ್ದೇಶನ ಮಾಡುವ ಸಂಬಂಧ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯಿತು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ನಾಮ ನಿರ್ದೇಶನ ಕುರಿತು ವಿಸ್ತೃತವಾದ ಚರ್ಚೆ ನಡೆಸಲಾಯಿತು. ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ. ವಿ. ರಮಣರೆಡ್ಡಿ, ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ್ ದವೆ ಜೊತೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಸೂಚನೆಯಂತೆ ನೇಮಕಾತಿ ನಿಯಮವನ್ನು ತಿದ್ದುಪಡಿ ಮಾಡುವ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ತಿಳಿದು ಬಂದಿದೆ.
ಪರಿಸರ ಸಂರಕ್ಷಣೆಯಲ್ಲಿ ಪ್ರಾಯೋಗಿಕ ಅನುಭವ ಮತ್ತು ಪರಿಸರ ಸಂಬಂಧಿ ಸಂಸ್ಥೆಯಲ್ಲಿ ಆಡಳಿತದಲ್ಲಿ ಅನುಭವ ಹೊಂದಿರುವ ವ್ಯಕ್ತಿಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ಹುದ್ದೆಗಳಿಗೆ ನೇಮಕ ಮಾಡಬೇಕಿದ್ದು, ಆ ನಿಟ್ಟಿನಲ್ಲಿ ಸಮಾಲೋಚನೆ ನಡೆಸಲಾಯಿತು.
ಇತ್ತೀಚೆಗೆ ಬಿಜೆಪಿ ಸೇರಿ ಸಚಿವರಾಗಿರುವ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಅರಣ್ಯ ಸಚಿವ ಆನಂದ್ ಸಿಂಗ್ ತಮ್ಮ ತಮ್ಮ ಆಪ್ತರಿಗೆ ಅಧ್ಯಕ್ಷ ಸ್ಥಾನ ಕೊಡಿಸಲು ಲಾಭಿ ನಡೆಸುತ್ತಿದ್ದು, ಸಲ್ಲಿಕೆಯಾಗಿರುವ 100 ಅರ್ಜಿಗಳಲ್ಲಿ 20 ಅರ್ಜಿ ಅನರ್ಹಗೊಂಡಿವೆ ಉಳಿದ ಅರ್ಜಿಗಳಲ್ಲಿ ಯಾರಿಗೆ ಸರ್ಕಾರ ಮಣೆ ಹಾಕಲಿದೆ, ಜಾರಕಿಹೊಳಿ ಕೈ ಈ ಬಾರಿಯೂ ಮೇಲಾಗಲಿದೆಯಾ ಕಾದು ನೋಡಬೇಕಿದೆ.