ಬೆಂಗಳೂರು: ಪ್ರಸ್ತುತ ಬೆಂಗಳೂರಿನಲ್ಲಿ ನೀರಿನ ಕೊರತೆ ಉದ್ಬವಿಸುವುದಿಲ್ಲ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಕಳೆದ ತಿಂಗಳು ಮತ್ತು ಈ ತಿಂಗಳು ಮೀಟರ್ ರೀಡ್ ಮಾಡೋಕೆ ಹೋಗಿಲ್ಲ. ಪ್ರತಿ ತಿಂಗಳ ಸರಾಸರಿ ಆಧಾರದಲ್ಲಿ ಬಿಲ್ ಮಾಡಿದ್ದೇವೆ. ಅಲ್ಲದೇ ಆನ್ಲೈನ್ ದೂರುಗಳ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ ನೀರಿನ ಬಳಕೆ ಪ್ರಮಾಣ ಕಡಿಮೆಯಾಗಿದೆ. ಹೋಟೆಲ್, ಕಾರ್ಖಾನೆಗಳು ಹಾಗೂ ಕಮರ್ಷಿಯಲ್ ಸೆಕ್ಟರ್ ಹಾಗೂ ಟೆಕ್ ಪಾರ್ಕ್ ಮತ್ತು ಮಾಲ್ಗಳಿಗೆ ಹೋಗ್ತಿದ್ದ ನೀರಿನ ಪ್ರಮಾಣ ಕಡಿಮೆಯಾಗಿದೆ. ಮನೆಬಳಕೆಗೆ ಉಪಯೋಗಿಸುತ್ತಿದ್ದ ನೀರಿನ ಪ್ರಮಾಣ ಹೆಚ್ಚಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು ವ್ಯಾಪ್ತಿಯಲ್ಲಿ ನೀರು ಪೂರೈಕೆ ಮಾಡುವುದು ಯಾವಾಗಲೂ ಕೂಡಾ ಸಮಸ್ಯೆಯಾಗಿಲ್ಲ. ಕೆಲವೊಂದು ಬಾರಿ ತಾಂತ್ರಿಕ ತೊಂದರೆಯಿಂದಾಗಿ ನೀರು ಪೂರೈಕೆಯಾಗಿರಲಿಲ್ಲ. ಡ್ಯಾಮ್ಗಳಲ್ಲಿ ಸಾಕಷ್ಟು ನೀರಿನ ಪ್ರಮಾಣವಿದೆ. ಬೆಂಗಳೂರಿನ ಸುತ್ತಮುತ್ತಲೂ 110 ಹಳ್ಳಿಗಳಲ್ಲಿ ಕಾವೇರಿ ನೀರಿನ ಸಂಪರ್ಕ ಕಡಿಮೆ ಇರುವ ಕಾರಣದಿಂದ ಅಂತಹ ಕಡೆ ಸಮಸ್ಯೆಯಾಗಿದೆ. ಅಲ್ಲಿನ ಜನತೆ ಕೊಳವೆ ಬಾವಿಯ ಮೇಲೆ ಅವಲಂಬಿತರಾಗಿದ್ದಾರೆ. ಇದರಿಂದಾಗಿ ಕೆಲವೊಮ್ಮೆ ಸಮಸ್ಯೆಯಾಗುತ್ತದೆ. ಹೀಗಾಗಿ ಆದಷ್ಟು ಬೇಗ ನೀರಿನ ಸಂಪರ್ಕ ಪಡೆಯಿರಿ ಎಂದು ತುಷಾರ್ ಗಿರಿನಾಥ್ ಮನವಿ ಮಾಡಿದ್ದಾರೆ.
ಈ ಮೊದಲು ಜಲಮಂಡಳಿಗೆ ಪ್ರತಿದಿನ ಸಾವಿರಕ್ಕೂ ಹೆಚ್ಚು ಕರೆಗಳು ಬರುತ್ತಿದ್ದವು. ಈಗ ಕೇವಲ ನೂರರ ಆಸುಪಾಸಿನಲ್ಲಿ ದೂರಿನ ಕರೆಗಳು ಬರುತ್ತಿವೆ. ಈ ವರ್ಷ ಬೇಸಿಗೆ ಆರಂಭವಾಗಿದ್ದರೂ ಡ್ಯಾಮ್ಗಳಲ್ಲಿ ನೀರಿನ ಮಟ್ಟ ಸಾಕಷ್ಟಿದೆ. ಕಬಿನಿಯಲ್ಲಿ 7 ಟಿಎಂಸಿ, ಕೆಆರ್ಎಸ್ನಲ್ಲಿ 17 ಟಿಎಂಸಿ ನೀರಿದ್ದು, ಯಾವುದೇ ಸಮಸ್ಯೆಯಾಗೋದಿಲ್ಲ ಎಂದು ತುಷಾರ್ ಗಿರಿನಾಥ್ ಸ್ಪಷ್ಟನೆ ನೀಡಿದ್ದಾರೆ.