ಬೆಂಗಳೂರು: ಸಿಎಂ ಜೊತೆ ಕೆಲಸ ಮಾಡುವ ಯಾವುದೇ ಸಿಬ್ಬಂದಿಗೂ ಕೊರೊನಾ ಪಾಸಿಟಿವ್ ಬಂದಿಲ್ಲ. ಸಿಎಂ ಆರೋಗ್ಯವಾಗಿಯೇ ಇದ್ದಾರೆ. ಯಾವುದೇ ಆತಂಕ ಬೇಡ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.
ಸಿಎಂ ನಿವಾಸ ಕಾವೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಳಿ ಇರುವ ಹೆಚ್ಚುವರಿ ಕಾರಿನ ಚಾಲಕ ಹಾಗೂ ಕಾರಿನಲ್ಲಿದ್ದ ಎಸ್ಕಾರ್ಟ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಆದರೆ ಸಿಎಂ ಜೊತೆ ನಿತ್ಯ ಕೆಲಸ ಮಾಡುವ ಯಾರಿಗೂ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿಲ್ಲ ಎಂದು ಮಾಹಿತಿ ನೀಡಿದರು.
ಸಿಎಂ ಲವಲವಿಕೆಯಿಂದ ಇದ್ದಾರೆ, ಆರೋಗ್ಯವಾಗಿದ್ದಾರೆ. ಬೆಳಿಗ್ಗೆ ಎಂದಿನಂತೆ ವಾಯು ವಿಹಾರ ಮಾಡಿದ್ದಾರೆ. ನಾನು ಅವರ ಜೊತೆ ಬೆಳಿಗ್ಗೆ 40 ನಿಮಿಷಗಳ ಕಾಲ ಮಾತನಾಡಿದ್ದೇನೆ. ಹಾಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಸಿಎಂ ನಿವಾಸದಲ್ಲಿ ಇದ್ದರೂ ಕೂಡ ಕೊರೊನಾ ನಿಯಂತ್ರಣ ಸಂಬಂಧ ಕೆಲಸ ಮುಂದುವರೆಸಲಿದ್ದಾರೆ. ದೂರವಾಣಿ ಮೂಲಕ ಸಲಹೆ, ಸೂಚನೆ ನೀಡಲಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಗಳನ್ನು ನಡೆಸಲಿದ್ದಾರೆ ಎಂದು ರೇಣುಕಾಚಾರ್ಯ ತಿಳಿಸಿದರು.