ಬೆಂಗಳೂರು: ಕೊರೊನಾದಿಂದ ಮುಂದೂಡಲ್ಪಟ್ಟಿದ್ದ ಎಸ್ಎಸ್ಎಲ್ಸಿ ಪರೀಕ್ಷೆ ಜೂನ್ನಿಂದ ಆರಂಭವಾಗಲಿದ್ದು, ಕಂಟೇನ್ಮೆಂಟ್ ವಲಯಗಳಲ್ಲಿ ಪರೀಕ್ಷೆ ನಡೆಯುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಎಸ್ಎಸ್ಎಲ್ಸಿ ಪರೀಕ್ಷೆ ಜೂನ್ನಲ್ಲಿ ಆರಂಭವಾಗಲಿದ್ದು, ಈ ವೇಳೆ ಪರೀಕ್ಷೆ ನಡೆಯುವ ಭಾಗಗಳಲ್ಲಿ ಕೊರೊನಾ ಕಂಡು ಬಂದು ಕಂಟೇನ್ಮೆಂಟ್ ವಲಯವೆಂದು ಘೋಷಣೆಯಾದರೆ, ಅಲ್ಲಿ ಪರೀಕ್ಷೆ ನಡೆಯುವುದಿಲ್ಲ. ಇನ್ನು ಅಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗೆ ಪುನರಾವರ್ತಿತ ಅಭ್ಯರ್ಥಿ ಎಂದು ಪರಿಗಣಿಸದೆ ಹೊಸ ಪರೀಕ್ಷಾರ್ಥಿ ಎಂದೇ ಪರಿಗಣಿಸಿ ಅವಕಾಶ ಕಲ್ಪಿಸಲಾಗುವುದೆಂದು ಮಾಹಿತಿ ನೀಡಿದರು.
ಇನ್ನು ವಲಸೆ ಕಾರ್ಮಿಕರ ಮಕ್ಕಳು, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ವಸತಿ ಶಾಲೆಗಳು, ಹಾಸ್ಟೆಲ್ಗಳಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ಅವರು ವಾಸವಾಗಿರುವ ಸ್ಥಳಗಳ ಹತ್ತಿರದ ಕೇಂದ್ರಗಳಲ್ಲಿ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗಲಿರುವ ಎಲ್ಲಾ ಅಭ್ಯರ್ಥಿಗಳಿಗೆ ಹೊಸದಾಗಿ ಹಾಲ್ ಟಿಕೆಟ್ಗಳನ್ನು ಒದಗಿಸಲಾಗುತ್ತಿದೆ. ಜುಲೈ 4 ಕ್ಕೆ ಪರೀಕ್ಷೆಗಳು ಮುಕ್ತಾಯವಾಗಲಿದ್ದು, ಜುಲೈ 31 ರೊಳಗೆ ಮೌಲ್ಯಮಾಪನ ಮುಗಿಸಿ, ಫಲಿತಾಂಶ ಪ್ರಕಟಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.