ಬೆಂಗಳೂರು: ಹೊಸಗುಡ್ಡದಹಳ್ಳಿ ಬಳಿ ನಡೆದ ಕೆಮಿಕಲ್ ಫ್ಯಾಕ್ಟರಿ ಬೆಂಕಿ ದುರಂತ ಪ್ರಕರಣ ಸಂಬಂಧ ಪಶ್ಚಿಮ ವಿಭಾಗದ ಬ್ಯಾಟರಾಯನಪುರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ವೇಳೆ ಹಲವು ವಿಚಾರಗಳು ಒಂದೊಂದಾಗೇ ಬೆಳಕಿಗೆ ಬರುತ್ತಿವೆ. ಸದ್ಯ ದೊರಕಿರುವ ಮಾಹಿತಿ ಪ್ರಕಾರ ಫ್ಯಾಕ್ಟರಿಯ ಮಾಲೀಕರಾದ ಸಜ್ಜಾನ್(65) ಹಾಗೂ ಕಮಲಾ ಕಾರ್ಖಾನೆಯನ್ನು ಅಧಿಕೃತವಾಗಿ ರಿಜಿಸ್ಟರ್ ಮಾಡಿಸಿರಲಿಲ್ಲ ಎಂದು ತಿಳಿದು ಬಂದಿದೆ.
ಈ ಫ್ಯಾಕ್ಟರಿಯ ಗೋಡೌನ್ಗೆ ಟ್ರೇಡ್ ಸೆಂಟರ್ ಲೈಸೆನ್ಸ್ ಇಲ್ಲ. ಹೀಗೆ ಸುಮಾರು 25 ವರ್ಷಗಳಿಂದ ಕಾರ್ಖಾನೆಯನ್ನು ಅಕ್ರಮವಾಗಿಯೇ ನಡೆಸಿಕೊಂಡು ಬರಲಾಗುತ್ತಿದೆ ಎನ್ನಲಾಗ್ತಿದೆ. ಬೊಮ್ಮನಹಳ್ಳಿ ಬಳಿ ಇರುವ ರೇಖಾ ಕೆಮಿಕಲ್ ಫಾಕ್ಟರಿಯಿಂದ ಕೆಮಿಕಲ್ ತಂದು ಹೊಸಗುಡ್ಡದಹಳ್ಳಿ ಬಳಿಯಿರುವ ರೇಖಾ ಕೆಮಿಕಲ್ ಫ್ಯಾಕ್ಟರಿಯಲ್ಲಿ ಶೇಖರಣೆ ಮಾಡಿದ್ದರು ಎಂದು ತಿಳಿದು ಬಂದಿದೆ.
ಮತ್ತೊಂದೆಡೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಸಜ್ಜಾನ್ ಹಾಗೂ ಕಮಲಾ ತಲೆಮರೆಸಿಕೊಂಡಿದ್ದಾರೆ. ಪಶ್ಚಿಮ ವಿಭಾಗ ಪೊಲೀಸರ ತಂಡ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದೆ.