ಬೆಂಗಳೂರು: ರಾಜಧಾನಿಯ ಹೃದಯಭಾಗ ಗಾಂಧಿನಗರ, ಮೆಜೆಸ್ಟಿಕ್ ಕಡೆ ಕಂಡ ಕಂಡಲ್ಲಿ ವಾಹನ ನಿಲ್ಲಿಸುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಈ ಭಾಗದಲ್ಲಿ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಮನವಿಯ ಮೇರೆಗೆ ಫ್ರೀಡಂ ಪಾರ್ಕ್ ಪಕ್ಕದಲ್ಲಿ ಬಿಬಿಎಂಪಿ ಬಹುಮಹಡಿ ಪಾರ್ಕಿಂಗ್ ಕಟ್ಟಡ ನಿರ್ಮಿಸಲು ತೀರ್ಮಾನಿಸಿತ್ತು. ಕೊನೆಗೆ ಬೇಡಿಕೆಯಂತೆ ಮಲ್ಟಿ ಫ್ಲೋರ್ಡ್ ಪಾರ್ಕಿಂಗ್ ಬಿಲ್ಡಿಂಗ್ ನಿರ್ಮಾಣವನ್ನು ಪಾಲಿಕೆ ಮುಗಿಸುವ ಹಂತದಲ್ಲಿದೆ.
ಅಂದಾಜು 79 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಬಹುಮಹಡಿ ಪಾರ್ಕಿಂಗ್ ಬಿಲ್ಡಿಂಗ್ ಅನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಪಾಲಿಕೆಯ ಈ ಹೊಸ ಪಾರ್ಕಿಂಗ್ ಕಟ್ಟಡದ ಗುತ್ತಿಗೆ ಪಡೆಯಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕಾರು, ದ್ವಿಚಕ್ರ ವಾಹನಗಳು ಸೇರಿದಂತೆ ಸುಮಾರು ಒಂದು ಸಾವಿರಕ್ಕೂ ಅಧಿಕ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲಿ ಮಾಡಲಾಗಿದೆ.
ಪಾಲಿಕೆಯಿಂದ ವಾರ್ಷಿಕ 4.5 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಇಷ್ಟೊಂದು ದೊಡ್ಡ ಮೊತ್ತದ ಆದಾಯ ಸಿಗುತ್ತದೋ ಇಲ್ಲವೋ ಎನ್ನುವ ಅನುಮಾನ ಗುತ್ತಿಗೆದಾರರಿಗೆ ಕಾಡುತ್ತಿದೆ. ಈ ಹಿನ್ನೆಲೆ ಗುತ್ತಿಗೆದಾರರು ಟೆಂಡರ್ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ ಒಂದು ತಿಂಗಳಿಂದ ಪಾರ್ಕಿಂಗ್ ಟೆಂಡರ್ ಕರೆದರೂ ಯಾವುದೇ ಗುತ್ತಿಗೆ ಕಂಪನಿಗಳು ಮುಂದೆ ಬಂದಿಲ್ಲ ಎಂದು ಹೇಳಲಾಗುತ್ತಿದೆ.
ರಸ್ತೆಗಳಲ್ಲಿ ನಿಲುಗಡೆಗೂ ಪಾರ್ಕಿಂಗ್ ಶುಲ್ಕ: ಈ ಭಾಗದಲ್ಲಿ ಕೆಲವು ಉಚಿತ ಪಾರ್ಕಿಂಗ್ ವ್ಯವಸ್ಥೆ ಸದ್ಯಕ್ಕೆ ಇದೆ. ಪಕ್ಕದಲ್ಲೇ ಫ್ರೀಡಂ ಪಾರ್ಕ್ ಕೂಡ ಇರುವುದರಿಂದ ಸಾರ್ವಜನಿಕ ವಾಹನಗಳು ನಿಲುಗಡೆಯಾಗುತ್ತಿದೆ. ಈ ಉಚಿತ ವಾಹನ ನಿಲುಗಡೆಯಲ್ಲಿ ವಾಹನ ನಿಲ್ಲಿಸಿದರೆ ಶುಲ್ಕ ವಿಧಿಸುವ ಬಹುಮಹಡಿ ಪಾರ್ಕಿಂಗ್‌ಗೆ ಜನ ಬರುವುದಿಲ್ಲ ಎಂಬುದು ಗುತ್ತಿಗೆದಾರರ ವಾದ.
ಈ ಹಿನ್ನೆಲೆ ಗುತ್ತಿಗೆದಾರರು ಟೆಂಡರ್ನಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಪಾಲಿಕೆ ಮೆಜೆಸ್ಟಿಕ್, ಗಾಂಧಿನಗರ ಸುತ್ತಮುತ್ತ ರಸ್ತೆಗಳಲ್ಲಿ ನಿಲುಗಡೆಗೆ ಪಾರ್ಕಿಂಗ್ ಶುಲ್ಕ ಹೇರಲು ತೀರ್ಮಾನಿಸಿದೆ. ಈ ಮೂಲಕ ಸದ್ಯಕ್ಕೆ ಶುರುವಾಗಿರುವ ಬಹುಮಹಡಿ ಪಾರ್ಕಿಂಗ್ ಟೆಂಡರ್ ತಲೆ ನೋವನ್ನು ನಿಭಾಯಿಸುವ ಲೆಕ್ಕಾಚಾರ ಹಾಕಿಕೊಂಡಿದೆ ಎನ್ನಲಾಗುತ್ತಿದೆ.
ವಿದ್ಯುತ್ ಉತ್ಪಾದನೆ: ಕಟ್ಟಡದಲ್ಲಿ ಒಟ್ಟು 556 ಕಾರು ಹಾಗೂ 445 ದ್ವಿಚಕ್ರ ವಾಹನಗಳನ್ನು ಏಕಕಾಲದಲ್ಲಿ ನಿಲ್ಲಿಸಬಹುದು. ಕಟ್ಟಡದ ಚಾವಣಿಯಲ್ಲಿ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಲಾಗಿದ್ದು, ನಿತ್ಯ 500 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುವುದು. ಲಿಫ್ಟ್ ಹಾಗೂ ಬೆಳಕಿನ ವ್ಯವಸ್ಥೆಗೆ ಇದೇ ವಿದ್ಯುತ್ ಬಳಸಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಓದಿ: ಯಾವುದೇ ಸರ್ಕಾರಿ ಶಾಲೆ ಮುಚ್ಚಲ್ಲ, ಅಗತ್ಯ ಬಿದ್ದರೆ ಎರಡು ಮೂರು ಶಾಲೆ ಸಂಯೋಜನೆ: ಸಚಿವ ನಾಗೇಶ್