ಬೆಂಗಳೂರು: ರಾಷ್ಟ್ರೀಯ ಪೌರತ್ವ ಕಾಯ್ದೆ ಜಾರಿ ಕುರಿತಂತೆ ದಿನೇ ದಿನೇ ದೇಶದಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಉತ್ತರ ಭಾರತದಲ್ಲಿ ಅಂತೂ ಪ್ರತಿಭಟನೆ ಕಾವು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪೌರತ್ವ ವಿಚಾರಕ್ಕಾಗಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ನೊಟಿಸ್ ನೀಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಪೌರತ್ವ ವಿಷಯಕ್ಕಾಗಿ ನಗರದಲ್ಲಿ ಇತ್ತೀಚೆಗೆ ಕೆಲವು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿರುವುದು ಕಂಡುಬಂದಿದೆ. ಕಾನೂನುಬಾಹಿರವಾಗಿ ಪ್ರತಿಭಟನೆ ಮಾಡಿರುವವರ ವಿಡಿಯೋ ಚಿತ್ರೀಕರಣದ ಮಾಡಲಾಗಿದೆ. ಅಂತಹವರಿಗೆ ನೊಟಿಸ್ ನೀಡಲಾಗುವುದು ಎಂದರು.
ಬೆಂಗಳೂರಿನಲ್ಲಿ ಇದೇ ವಿಚಾರಕ್ಕಾಗಿ ಹಲವು ಸಂಘ ಸಂಸ್ಥೆಗಳು ಪ್ರತಿಭಟನೆಗೆ ಅವಕಾಶ ಕೋರಿ ಸಾಕಷ್ಟು ಪತ್ರಗಳು ಬಂದಿದ್ದವು. ಆದರೆ ಪ್ರತಿಭಟನೆ ನಡೆಸಲು ಅನುಮತಿ ನೀಡಿಲ್ಲ. ಒಂದು ವೇಳೆ ಕಾನೂನುಬಾಹಿರವಾಗಿ ಪ್ರತಿಭಟನೆ ಮಾಡಬೇಕಾದರೆ ಉತ್ತರ ಭಾರತದಲ್ಲಿ ಹೋಗಿ ಮಾಡಿ, ಇಲ್ಲಿ ಏನಾದರೂ ಪ್ರತಿಭಟನೆ ಮಾಡುವುದು ಕಂಡು ಬಂದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಸೂಚನೆ ನೀಡಿದ್ದಾರೆ.
ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಚೋದನಕಾರಿ ಪೋಸ್ಟ್ ಹಾಕುವವರ ಮೇಲೆ ಐಟಿ ಸೆಲ್ ನಿಂದ ನಿಗಾವಹಿಸಲಾಗಿದೆ ಎಂದು ಭಾಸ್ಕರ್ ರಾವ್ ಮೌಖಿಕವಾಗಿ ತಿಳಿಸಿದ್ದಾರೆ.