ಬೆಂಗಳೂರು : ರಾಜ್ಯದಲ್ಲಿ ಆಮ್ಲಜನಕದ ಉತ್ಪಾದನೆ ಮಾಡಲಾಗುತ್ತಿದ್ದು, ಕೊರತೆ ಇಲ್ಲ. ರಾಜ್ಯದ ಇತರೆ ಜಿಲ್ಲೆಗಳಿಗೆ ಹೊರತುಪಡಿಸಿದರೆ ಬೆಂಗಳೂರು ನಗರದಲ್ಲಿರುವ ಆಕ್ಸಿಜನ್ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ತಿಳಿಸಿದರು.
ಕೋವಿಡ್ ರೋಗಿಗಳಿಗೆ ಆಮ್ಲಜನಕ ಪೂರೈಕೆ ಮತ್ತು ಲಭ್ಯತೆಯ ಬಗ್ಗೆ ಚರ್ಚೆ ನಡೆಸಲು ಇಂದು ಸಂಜೆ ವಿಧಾನಸೌಧದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.
ಸಭೆಯ ನಂತರ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್, ಬೆಂಗಳೂರು ನಗರಕ್ಕೆ ಹೆಚ್ಚಿನ ಆಮ್ಲಜನಕದ ಅವಶ್ಯಕತೆ ಕಂಡು ಬರುತ್ತಿದೆ. ರಾಜ್ಯದಲ್ಲಿ ಆಮ್ಲಜನಕದ ಕೊರತೆ ಇಲ್ಲ. ರಾಜ್ಯಕ್ಕೆ ಅಗತ್ಯವಿರುವಷ್ಟು ಆಮ್ಲಜನಕದ ಉತ್ಪಾದನೆ ರಾಜ್ಯದಲ್ಲಿ ಆಗುತ್ತಿದೆ. ಸಿಲಿಂಡರ್‌ಗಳ ಕೊರತೆ ಇದ್ದು, ಅದನ್ನು ನಿವಾರಿಸುವ ನಿಟ್ಟಿನಲ್ಲಿ ಈಗಾಗಲೇ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲಾಗಿದೆ.
ನಗರಕ್ಕೆ ತಲುಪುವ ಆಮ್ಲಜನಕವನ್ನು ಸರಿಯಾದ ರೀತಿ ಹಾಗೂ ಪ್ರಮಾಣದಲ್ಲಿ ಆಸ್ಪತ್ರೆಗಳಿಗೆ ತಲುಪಿಸುವ ವಿಧಾನವನ್ನು ರೂಪಿಸುವ ಅಗತ್ಯದೆ ಇದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದೇವೆ ಎಂದು ಹೇಳಿದರು.
ಆಮ್ಲಜನಕ ಉತ್ಪಾದನೆ ಮಾಡುವ ಉತ್ಪಾದಕರೊಂದಿಗೂ ಸಮಾಲೋಚನೆ ನಡೆಸಿದ ಸಚಿವರು, ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿದುಕೊಂಡರು. ಅಲ್ಲದೆ, ಅವುಗಳಿಗೆ ಅಗತ್ಯ ಪರಿಹಾರ ಸೂಚಿಸುವಂತೆ ಅಧಿಕಾರಿಗಳಿಗೆ ಹೇಳಿದರು.
ಜನರ ಆರೋಗ್ಯ ಕಾಪಾಡುವುದು ಮೊದಲ ಆದ್ಯತೆ ಆಗಿದೆ. ಈ ನಿಟ್ಟಿನಲ್ಲಿ ಆಸ್ಪತ್ರೆಗಳಿಗೆ ಬೇಕಾಗಿರುವ ಆಮ್ಲಜನಕದ ಪೂರೈಕೆ ಮಾಡಬೇಕು, ಕೈಗಾರಿಕೆಗಳಿಗೆ ಆಮ್ಲಜನಕ ಪೂರೈಸುವುದನ್ನು ಕಡಿಮೆ ಮಾಡಬೇಕು ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ ಸುಧಾಕರ್ ಮಾತನಾಡಿ, ರಾಜ್ಯದಲ್ಲಿ ಉತ್ಪಾದನೆ ಆಗುತ್ತಿರುವ ಆಮ್ಲಜನಕವನ್ನು ಅಕ್ಕಪಕ್ಕದ ರಾಜ್ಯಗಳಿಗೂ ಕಳುಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುವ ನಿಟ್ಟಿನಲ್ಲಿ ರಾಜ್ಯದಲ್ಲೇ ಅದರ ಉಪಯೋಗ ಮಾಡಿಕೊಳ್ಳಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಕಾರ್ಖಾನೆಗಳಿಗೆ ಅಗತ್ಯ ಸೂಚನೆ ನೀಡಬೇಕು. ಅಲ್ಲದೆ, ರಾಜ್ಯಕ್ಕೆ ಬೇಕಾಗಿರುವ ಸಿಲಿಂಡರ್‌ಗಳನ್ನು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದರು.
ರಾಜ್ಯದಲ್ಲಿ ಆಮ್ಲಜನಕಕ್ಕೆ ಯಾವುದೇ ಕೊರತೆಯಾಗದಂತೆ ಉತ್ಪಾದನೆ ಮಾಡಬೇಕು. ಹಾಗೆಯೇ ಕೊರತೆ ಉಂಟಾಗದಂತೆ ಸಿಲಿಂಡರ್‌ಗಳನ್ನು ಪೂರೈಕೆ ಮಾಡಬೇಕು. ಬೆಂಗಳೂರು ನಗರಕ್ಕೆ 3,200ರಷ್ಟು ಸಿಲಿಂಡರ್ ಬೇಡಿಕೆ ಇದೆ. ಇದಕ್ಕೆ ತಕ್ಕಂತೆ ಪೂರೈಕೆ ಮಾಡಬೇಕು ಎಂದು ಸೂಚಿಸಲಾಯಿತು. ಇದಕ್ಕೆ ಉತ್ಪಾದಕ ಸಂಸ್ಥೆಗಳು ಹಾಗೂ ಪೂರೈಕೆದಾರರು ಸಹಮತ ವ್ಯಕ್ತಪಡಿಸಿದರು. ಕೆಲ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಬೇಕಿದೆ ಎಂದು ಸಭೆಗೆ ತಿಳಿಸಲಾಗಿದೆ ಎಂದರು.
ದಿನದಿಂದ ದಿನಕ್ಕೆ ಆಮ್ಲಜನಕ ಬೇಡಿಕೆಯಲ್ಲಿ ವ್ಯತ್ಯಾಸವಾಗಬಹುದು. ಅದಕ್ಕೆ ತಕ್ಕಂತೆ ಪೂರೈಕೆ ಮಾಡಬೇಕಾಗುತ್ತದೆ. ಏಪ್ರಿಲ್ 30ರವರೆಗೂ ಇರುವ ಬೇಡಿಕೆಯನ್ನು ನೋಡಿಕೊಂಡು ಸಿದ್ಧತೆ ಮಾಡಿಕೊಳ್ಳಬೇಕು. ಕೈಗಾರಿಕೆ ಬಳಕೆಗೂ ಆಮ್ಲಜನಕ ಅಗತ್ಯವಿದೆ.
ಆದರೆ, ಮೊದಲ ಆದ್ಯತೆಯನ್ನು ಆರೋಗ್ಯ ವಲಯಕ್ಕೆ ನೀಡಬೇಕು. ಇದಕ್ಕಾಗಿ ಕೈಗಾರಿಕಾ ಬಳಕೆಗೆ ಪೂರೈಸುವ ಆಮ್ಲಜನಕದ ಪ್ರಮಾಣ ಕಡಿಮೆ ಮಾಡಿ, ಆರೋಗ್ಯ ಕೇಂದ್ರಗಳಿಗೆ ಹೆಚ್ಚು ಆಮ್ಲಜನಕ ಪೂರೈಸಬೇಕೆಂದು ಸೂಚಿಸಲಾಗಿದೆ ಎಂದರು.
ಕೇಂದ್ರಕ್ಕೆ ಮನವಿ : ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಆಮ್ಲಜನಕವನ್ನು ಅಕ್ಕಪಕ್ಕದ ರಾಜ್ಯಗಳಿಗೂ ಕಳುಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುವ ನಿಟ್ಟಿನಲ್ಲಿ ರಾಜ್ಯದಲ್ಲೇ ಅದರ ಉಪಯೋಗ ಮಾಡಿಕೊಳ್ಳಬೇಕಾಗಿದೆ. ಈ ಹಿನ್ನೆಲೆ ಕಾರ್ಖಾನೆಗಳಿಗೆ ಅಗತ್ಯ ಸೂಚನೆ ನೀಡಬೇಕು. ರಾಜ್ಯಕ್ಕೆ ಬೇಕಾಗಿರುವ ಸಿಲಿಂಡರ್‌ಗಳನ್ನು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಶೇ.50ರಷ್ಟು ಹಾಸಿಗೆ : ಇದಕ್ಕೂ ಮುನ್ನ ಮಾತನಾಡಿದ ಸಚಿವ ಡಾ.ಕೆ ಸುಧಾಕರ್, ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಹಾಸಿಗೆ ಮೀಸಲಿಡಲಾಗುತ್ತಿದೆ. ಅಗತ್ಯಕ್ಕೆ ತಕ್ಕಂತೆ ಹಾಸಿಗೆ ಮೀಸಲಿಡಲಾಗುತ್ತಿದೆ ಎಂದರು.
ಓದಿ: ಪ್ರಮಾಣ ಪತ್ರ ನೀಡಿ ಬದುಕಿರುವವರನ್ನೇ ಸಾಯಿಸಿತಾ ಆಸ್ಪತ್ರೆ!?: ಗಂಭೀರ ಆರೋಪ