ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಶಕ್ತಿ ತೋರಿಸಲು ಹಮ್ಮಿಕೊಂಡಿದ್ದ ಸಮಾವೇಶ ನಿರೀಕ್ಷಿತ ಫಲ ಕಂಡಿಲ್ಲ.
ಜೆಡಿಎಸ್ ಅಳವಡಿಸಿದ್ದ ಬ್ಯಾನರ್ನಲ್ಲಿ ಯಾವ ಒಬ್ಬ ಕಾಂಗ್ರೆಸ್ನ ಹಿರಿಯ ನಾಯಕರು ಕಾಣಸಿಗಲಿಲ್ಲ. ಬೆಂಗಳೂರಿನ ಮಾದಾವರದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಪರಿವರ್ತನ ಸಮಾವೇಶದಲ್ಲಿ ಈ ಸನ್ನಿವೇಶ ಗೋಚರಿಸಿತು.
ಜೆಡಿಎಸ್ ಅಳವಡಿಸಿದ್ದ ಬೃಹತ್ ಬ್ಯಾನರ್ನಲ್ಲಿ ಕೇವಲ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕಂಡು ಬಂದರು. ಇವರ ಹೊರತಾಗಿ ರಾಜ್ಯ ನಾಯಕರು ಅಂದರೆ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಮಾತ್ರ ಕಾಣ ಸಿಕ್ಕರು.
ಸಮಾರಂಭದಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತದನಂತರ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಭಾಷಣ ಮಾಡಿದರು. ಇದಕ್ಕೂ ಮುನ್ನ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತಿತರ ನಾಯಕರು ಮಾತನಾಡಿದರು. ಆದರೆ, ಕಾರ್ಯಕರ್ತರು ರಾಹುಲ್ ಗಾಂಧಿ ಭಾಷಣ ಕೇಳಲು ಕುಳಿತುಕೊಳ್ಳಲಿಲ್ಲ. ದೊಡ್ಡ ಗೌಡರ ಭಾಷಣ ಮುಗಿಯುತ್ತಿದ್ದಂತೆ ಅರ್ಧಕ್ಕೂ ಹೆಚ್ಚು ಕಾರ್ಯಕರ್ತರು ಹೊರಟು ಹೋದರು.
ಉಭಯ ಪಕ್ಷಗಳ ರಾಷ್ಟ್ರೀಯ ನಾಯಕರು ಒಂದಾಗಿದ್ದರೂ ಕೂಡ ರಾಜ್ಯ ನಾಯಕರು ಹಾಗೂ ಕಾರ್ಯಕರ್ತರು ಇನ್ನೂ ಒಂದಾಗುವ ಮನಸ್ಸು ಮಾಡಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತೆ. ಒಂದೆಡೆ ಬ್ಯಾನರ್ ಪೊಲಿಟಿಕ್ಸ್ ರಾಜ್ಯ ನಾಯಕರ ಬಣ್ಣ ಬಯಲು ಮಾಡಿದರೆ, ಕಾರ್ಯಕರ್ತರ ನಡುವಳಿಕೆ ನಾವು ಇನ್ನೂ ಹೊಂದಿಕೊಂಡಿಲ್ಲ ಎಂಬುದನ್ನು ತೋರಿಸುವಂತಿತ್ತು.