ಬೆಂಗಳೂರು : ಕೊರೊನಾ ಹಿನ್ನೆಲೆ ಹೊಸ ವರ್ಷದ ಆಚರಣೆಗೆ ಬ್ರೇಕ್ ಹಾಕಲಾಗಿದ್ದು, ರೆಸ್ಟೊರೆಂಟ್, ಹೋಟೆಲ್, ಪಬ್-ಕ್ಲಬ್‌ಗಳಲ್ಲಿ ಕೂಡ ಈ ಬಾರಿ ಹೊಸ ವರ್ಷಾಚರಣೆಗೆ ಅನುವು ನೀಡದಿರಲು ಬೆಂಗಳೂರು ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ.
ಕೊರೊನಾ ಸೋಂಕು ವರ್ಷದಾರಂಭದಿಂದಲೇ ಎಲ್ಲಾ ಸಂಭ್ರಮಾಚರಣೆಗೆ ಕಂಟಕವಾಗಿದೆ. ಲಾಕ್‌ಡೌನ್‌ನಿಂದಾಗಿ ಯಾವುದೇ ಹಬ್ಬ ಹರಿದಿನಗಳನ್ನ ಆಚರಿಸಲು ಆಗಿರಲಿಲ್ಲ. ಲಾಕ್‌ಡೌನ್ ಸಡಿಲವಾದ ನಂತರವೂ ಕೂಡ ಹಬ್ಬದಾಚರಣೆಗಳನ್ನ ಸರ್ಕಾರದ ಮಾರ್ಗ ಸೂಚಿಯಂತೆ ಆಚರಿಸವಂತಾಗಿತ್ತು. ಪ್ರತೀ ಬಾರಿ ಹೊಸ ವರ್ಷಕ್ಕೆ ಇಡೀ ಬೆಂಗಳೂರು ಜನತೆ ಬ್ರಿಗೇಡ್ ರಸ್ತೆಯಲ್ಲಿ ಸೇರುತ್ತಿದ್ದರು. ಪಾಲಿಕೆ ಕೂಡ ಈ ಬಾರಿ ಹೊಸ ವರ್ಷದ ಸಂಭ್ರಮಕ್ಕೆ ಬ್ರೇಕ್ ಹಾಕಿದ್ದು, ಬ್ರಿಗೇಡ್ ರಸ್ತೆಯಲ್ಲಿ ಯಾರು ಇರದಂತೆ ಕಟ್ಟೆಚ್ಚರ ವಹಿಸಲು ಸಿದ್ಧವಾಗಿದೆ.
ಬ್ರಿಗೇಡ್‌ನಲ್ಲಿ ಆಚರಿಸದಿದ್ದರೇನು ರೆಸ್ಟೊರೆಂಟ್, ಹೋಟೆಲ್, ಪಬ್-ಕ್ಲಬ್‌ಗಳಲ್ಲಿ ಆಚರಿಸುವ ಯೋಜನೆ ಇದ್ದವರಿಗೂ ಕೂಡ ನಿರಾಶೆ ಕಟ್ಟಿಟ್ಟ ಬುತ್ತಿಯಾಗಿದೆ. ಯಾಕಂದ್ರೆ ಹೊಸ ವರ್ಷಾಚರಣೆಗೆ ರೆಸ್ಟೊರೆಂಟ್ ಪಬ್-ಕ್ಲಬ್‌ಗಳಲ್ಲಿ ಅನುಮತಿ ನೀಡಿಲ್ಲ. ಈ ಮೊದಲು ಕೆಲವರು ತಮ್ಮ ಹೊಸವರ್ಷವನ್ನ ಮುಕ್ತವಾಗಿ ಸ್ನೇಹಿತರೊಂದಿಗೆ ಆಚರಿಸಲು ರೆಸಾರ್ಟ್, ಪಬ್- ಕ್ಲಬ್, ರೆಸ್ಟೊರೆಂಟ್‌ಗಳಿಗೆ ಹೋಗುತ್ತಿದ್ದರು. ಆದ್ರೆ, ಈ ಬಾರಿ ಯಾವುದೇ ಆಚರಣೆಗೆ ಅವಕಾಶ ಕಲ್ಪಿಸಿಲ್ಲ.
ಗ್ರಾಹಕರಿಗೆ ಕೇವಲ ರಾತ್ರಿ ಊಟ ಸೇವಿಸಲು ಮಾತ್ರ ಅವಕಾಶ ನೀಡಲಾಗಿದ್ದು, ಎಲ್ಲವೂ ಸರ್ಕಾರದ ಮಾರ್ಗ ಸೂಚಿಯಂತೆ ನಡೆಯಲಿದೆ. ಇದರಿಂದಾಗಿ ಹೋಟೆಲ್ ಮಾಲೀಕರಿಗೆ ಭಾರಿ ನಷ್ಟವಾದ್ರು ಕೂಡ, ಕೊರೊನಾ ಸೋಂಕು ಹರಡುವಿಕೆಯನ್ನ ತಡೆಗಟ್ಟಲು ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಈ ನಿರ್ಧಾರವನ್ನ ತೆಗೆದುಕೊಂಡಿದೆ.
ಇದನ್ನೂ ಓದಿ:ಯುಕೆಯಿಂದ ರಾಜ್ಯಕ್ಕೆ ಬಂದವರ ಬಗ್ಗೆ ಬಿಬಿಎಂಪಿಗೆ ಮಾಹಿತಿ ನೀಡಿದ ಆರೋಗ್ಯ ಇಲಾಖೆ