ಬೆಂಗಳೂರು: ರಾಜ್ಯದ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಲಕ್ಷ್ಮಿ ಯೋಜನೆ ನೋಂದಣಿ ಇದೀಗ ಮತ್ತಷ್ಟು ಸರಳಗೊಂಡಿದೆ. ಅರ್ಹ ಫಲಾನುಭವಿಗಳು ನೇರವಾಗಿ ತಮ್ಮ ಹತ್ತಿರದ ನೋಂದಣಿ ಕೇಂದ್ರಗಳಿಗೆ ತಮ್ಮ ದಾಖಲೆಗಳೊಂದಿಗೆ ತೆರಳಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಇದಕ್ಕೂ ಮೊದಲು ಅರ್ಹ ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ಮೆಸೇಜ್ (ಶೆಡ್ಯೂಲಿಂಗ್) ಬಂದರಷ್ಟೇ ನೋಂದಣಿ ಕೇಂದ್ರಗಳಿಗೆ ತೆರಳಬೇಕಿತ್ತು. ಇದೀಗ ಎಸ್‌ಎಂಎಸ್ ಅವಲಂಬಿಸದೇ ನೇರವಾಗಿ ನೋಂದಣಿ ಕೇಂದ್ರಗಳಿಗೆ ದಾಖಲಾತಿಗಳೊಂದಿಗೆ ತೆರಳಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಸಚಿವರು ತಿಳಿಸಿದ್ದಾರೆ. ಯೋಜನೆಗೆ ಚಾಲನೆ ಸಿಕ್ಕ 7 ದಿನಗಳಲ್ಲೇ 50 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗಳು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಗೃಹ ಲಕ್ಷ್ಮಿ ನೋಂದಣಿಗೆ ಹಣ ಪಡೆದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು. ಸೇವಾ ಕೇಂದ್ರಗಳಲ್ಲಿ ಅಸಡ್ಡೆ ತೋರಿದರೆ ಅಂತಹವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಇಂದು ಗೃಹ ಲಕ್ಷ್ಮಿ ಯೋಜನೆಗೆ 5,28,051 ಮಹಿಳೆಯರಿಂದ ನೋಂದಣಿಯಾಗಿದ್ದು, ಒಟ್ಟಾರೆ ಇದುವರೆಗೂ 55,89,865 ಮಹಿಳೆಯರಿಂದ ಅರ್ಜಿ ಸಲ್ಲಿಕೆಯಾಗಿದೆ.
ತಪ್ಪಿತಸ್ಥರ ವಿರುದ್ಧ ಕಾನೂನಿನಡಿ ಕ್ರಮ: ಉಡುಪಿಯ ಖಾಸಗಿ ಕಾಲೇಜೊಂದರ ವಿಡಿಯೋ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಕಾನೂನಿನಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಪ್ರಕರಣ ಕುರಿತು ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಾನೂನಿನಡಿ ಕ್ರಮಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು. ಕಾನೂನಿಗಿಂತ ಯಾರೂ ದೊಡ್ಡವರಲ್ಲ, ನನಗೆ ಮಾಹಿತಿ ಬಂದ ಪ್ರಕಾರ ಘಟನೆಗೆ ಸಂಬಂಧ ಪಟ್ಟಂತೆ ಯಾವುದೇ ವಿಡಿಯೋ ಕೂಡ ವೈರಲ್ ಆಗಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಈವರೆಗೆ ಮಳೆಗೆ 38 ಮಂದಿ ಸಾವು, ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ: ಸಿಎಂ ಸಿದ್ದರಾಮಯ್ಯ ಘೋಷಣೆ