ಬೆಂಗಳೂರು: ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಪಡಿತರ ಅಂಗಡಿಗಳು ಅರ್ಹ ಫಲಾನುಭವಿಗಳಿಂದ ಪಡಿತರ ವಿತರಣೆ ವೇಳೆ ಯಾವುದೇ ದಾಖಲಾತಿಗಳನ್ನು ಕೇಳದಂತೆ ಆಹಾರ ಹಾಗೂ ನಾಗರಿಕ ಪೂರೈಕೆ ಇಲಾಖೆ ಸೂಚನೆ ನೀಡಿದೆ.
ಈ ಸಂಬಂಧ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ನೆರೆ ಪೀಡಿತಕ್ಕೊಳಗಾದ ಪ್ರದೇಶಗಳಲ್ಲಿನ ಪಡಿತರ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಡಿ ಪಡಿತರ ವಿತರಿಸುವಾಗ ಯಾವುದೇ ದಾಖಲಾತಿಗಳನ್ನು ಕೇಳುವಂತಿಲ್ಲ ಎಂದು ನಿರ್ದೇಶನ ನೀಡಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಅರ್ಹ ಪಡಿತರ ಫಲಾನುಭವಿಗಳಿಂದ ಪಡಿತರ ಚೀಟಿ, ಆಧಾರ್ ಕಾರ್ಡ್, ಗುರುತಿನ ಚೀಟಿಯನ್ನು ಹಾಜರುಪಡಿಸುವುದು ಕಡ್ಡಾಯಗೊಳಿಸಬಾರದು ಎಂದು ಸೂಚನೆ ನೀಡಿದೆ.
ನೆರೆ ಪೀಡಿತ ಪ್ರದೇಶಗಳಲ್ಲಿ ಪಡಿತರ ಚೀಟಿ ಸೇರಿದಂತೆ ಎಲ್ಲ ಪ್ರಮುಖ ಗುರುತಿನ ದಾಖಲಾತಿಗಳು ನೀರು ಪಾಲಾಗಿವೆ. ಆದರೆ ನ್ಯಾಯಬೆಲೆ ಅಂಗಡಿಗಳಲ್ಲಿ ಅರ್ಹ ಪಡಿತರ ಫಲಾನುಭವಿಗಳಿಗೆ ಪಡಿತರ ನೀಡಲು ದಾಖಲಾತಿ ಕೇಳುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿತ್ತು. ಈ ಹಿನ್ನಲೆಯಲ್ಲಿ ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ ಈ ಸುತ್ತೋಲೆ ಹೊರಡಿಸಿದೆ.
ನ್ಯಾಯಬೆಲೆ ಅಂಗಡಿಗಳಲ್ಲಿರುವ ಪಡಿತರ ಪಲಾನುಭವಿಗಳ ಮಾಹಿತಿಯನ್ನು ಆಧರಿಸಿ ಇಂಟರ್ನೆಟ್ ಸಂಪರ್ಕ ಕಡಿತಗೊಂಡಿರುವ ಪ್ರದೇಶಗಳಲ್ಲಿ ಮಾತ್ರ ಆಫ್ ಲೈನ್ ಮೂಲಕ ಮುಂದಿನ ಮೂರು ತಿಂಗಳವರೆಗೆ ಪಡಿತರ ವಿತರಣೆ ಮಾಡಬಹುದಾಗಿದೆ ಎಂದು ನಿರ್ದೇಶನ ನೀಡಲಾಗಿದೆ.
ಆಹಾರ ಇಲಾಖೆಯ ಸೂಚನೆ ಏನು?:
- ಪಡಿತರ ಪಡೆಯಲು ಬಂದವರ ಮೇಲೆ ಅನುಮಾನ ಇದ್ದರೆ ಅವರ ವಿಳಾಸ, ಹೆಸರು, ಮೊಬೈಲ್ ನಂ. ಪಡೆದು ಖಾತರಿ ಮಾಡುವುದು
- ಪ್ರವಾಹದಲ್ಲಿ ಪಡಿತರ ಚೀಟಿ ಕಳೆದುಕೊಂಡವರಿಗೆ ಕೂಡಲೇ ಪಡಿತರ ಚೀಟಿ ವಿತರಿಸಬೇಕು
- ಆಫ್ಲೈನ್ ಮೂಲಕ ಪಡಿತರ ವಿತರಣೆ ಮಾಡುವ ಆಯಾ ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯ ಫಲಾನುಭವಿಗಳ ವಿವರವನ್ನು ತಿಂಗಳಾಂತ್ಯದಲ್ಲಿ ಅವರಿಗೆ ವಿತರಿಸಿರುವ ಪಡಿತರ ಪ್ರಮಾಣದ ವಿವರದೊಂದಿಗೆ ಆಹಾರ ಡಾಟಾಬೇಸ್ಗೆ ಅಪ್ ಲೋಡ್ ಮಾಡಲು ಕ್ರಮ
- ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಿಶೇಷ ಆಂದೋಲನ ಮೂಲಕ ಎಲ್ಲ ಫಲಾನುಭವಿಗಳಿಗೆ ಅವರ ಪಡಿತರ ಚೀಟಿಗಳ ಪ್ರತಿಯನ್ನು ಮುದ್ರಿಸಿ ನೀಡಲು ಕ್ರಮ ವಹಿಸಲಾಗಿದೆ