ಬೆಂಗಳೂರು: ಕೋವಿಡ್ ನಿಯಂತ್ರಣ ಸಂಬಂಧ ಈಗಿರುವ ನಿಯಮ ಇರುತ್ತದೆ. ಅದರಲ್ಲಿ ಯಾವುದೇ ಬದಲಾವಣೆ, ಸಡಿಲಿಕೆ ಇಲ್ಲ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಲಾಕ್ಡೌನ್ ಜಾರಿ ಮಾಡುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.
ಸರ್ಕಾರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಮುಕ್ತ ದೇಶ, ರಾಜ್ಯ ಆಗಲಿ ಎಂದು ಸಂಕ್ರಾಂತಿ ದಿನ ಶುಭಾಶಯ ಕೋರುತ್ತಿದ್ದೇನೆ. ನಿತ್ಯ ಕೋವಿಡ್ ಕೇಸ್ ಡಬ್ಬಲ್ ಆಗುತ್ತಿದೆ. ನಮ್ಮ ಜೀವ ನಮ್ಮ ಕೈಯಲ್ಲಿ ಇದೆ. ಹಾಗಾಗಿ ಕೊವಿಡ್ ನಿಯಂತ್ರಣಕ್ಕೆ ಜನರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಮಾಸ್ಕ್ ಇಲ್ಲದೇ ಓಡಾಡಬಾರದು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಸರ್ಕಾರದ ಜತೆಯಲ್ಲಿ ಎಲ್ಲರೂ ಕೈಜೋಡಿಸಬೇಕು. ಈಗಿರುವ ನಿಯಮ ಮುಂದುವರೆಯಲಿದೆ. ಆದರೆ ಯಾವುದೇ ಕಾರಣಕ್ಕೂ ಲಾಕ್ ಡೌನ್ ಇಲ್ಲ. ನಿನ್ನೆ (ಗುರುವಾರ) ಪ್ರಧಾನಿ ನರೇಂದ್ರ ಮೋದಿ ಕೂಡ ಅದೇ ಅಭಿಪ್ರಾಯಪಟ್ಟಿದ್ದಾರೆ. ಸಂಕ್ರಾಂತಿ ದಿನ ಲಾಕ್ ಡೌನ್ ಇಲ್ಲ ಎನ್ನುವ ಸಿಹಿ ಸುದ್ದಿ ಕೊಟ್ಟಿದ್ದಾರೆ ಎಂದರು.
ಪಾದಯಾತ್ರೆ ತಡೆಯಲು ನಾವು ಷಡ್ಯಂತ್ರ ಮಾಡಿಲ್ಲ:
ಪಾದಯಾತ್ರೆ ತಡೆಯುವಲ್ಲಿ ಯಾವುದೇ ಷಡ್ಯಂತ್ರ ಇಲ್ಲ. ಅವರ ವಿಫಲಕ್ಕೆ ಅವರು ಏನು ಬೇಕಾದರೂ ಮಾತನಾಡಬಹುದು. ಅವರು ಪಾದಯಾತ್ರೆ ಮಾಡಿದ್ದೇ ತಪ್ಪು. ರಾಜಕೀಯದ ಲಾಭ ಪಡೆಯಲು ಪಾದಯಾತ್ರೆ ಮಾಡಲು ಹೊರಟರು. ಅವರಿಗೆ ರಾಜಕೀಯ ಲಾಭಕ್ಕಿಂತ ನಷ್ಟ ಆಯ್ತು. ಬೇರೆ ಏನೂ ಆಗಲಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಾಂಗ್ರೆಸ್ ಆರೋಪಕ್ಕೆ ಟಾಂಗ್ ನೀಡಿದರು.
ಯಾರ ವಿರುದ್ಧ ಪಾದಯಾತ್ರೆ ಮಾಡುತ್ತಾರೆ?:
ಮೇಕೆದಾಟು ಯೋಜನೆಗೆ ನಾಡಿನಲ್ಲಿ ಯಾರವಿರೋಧ ಇದೆ?. ಯಾವ ಪಕ್ಷದ ವಿರೋಧ ಇದೆ?. ಯಾರ ವಿರುದ್ಧ ಪಾದಯಾತ್ರೆ ಮಾಡುತ್ತಾರೆ?.ಅಧಿಕಾರದಲ್ಲಿ ಇದ್ದಾಗ ಏನೂ ಮಾಡಲು ಆಗದೇ, ಈಗ ಕಾಲು ನಡಿಗೆ ಜಾಥಾ ಮಾಡಿ ಅದರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಜನಕ್ಕೆ ಮೇಕೆದಾಟು ಯೋಜನೆಯ ಲಾಭ ಕೊಡಿಸಬೇಕು. ಅದನ್ನು ಬಿಟ್ಟು ಅದರ ಹೆಸರಿನಲ್ಲಿ ತಮ್ಮ ಲಾಭ ಮಾಡಿಕೊಳ್ಳಲು ಹೊರಟರು. ಖಂಡಿತ ಇದು ನಾಚಿಕೆಗೇಡು ಎಂದರು.
ಮೇಕೆದಾಟು ಯೋಜನೆ ಜಾರಿಗೆ ತರುತ್ತೇವೆ:
ಹಿಂದಿನ ಬಾರಿ ಇವರು ಪಾದಯಾತ್ರೆ ಮಾಡಿದ್ದರು. 'ಕೃಷ್ಣೆ ಕಡೆಗೆ ಕಾಂಗ್ರೆಸ್ ನಡಿಗೆ' ಎಂದು ಇದೇ ದಿನ 14 ನೇ ತಾರೀಕು ಸಾಂಕ್ರಾಂತಿ ದಿನ ಕೊಡಲ ಸಂಗಮಕ್ಕೆ ಹೋಗಿ ಅದರ ನೀರನ್ನು ಹಿಡಿದು ಶಪಥ ಮಾಡಿದ್ದರು. ವರ್ಷಕ್ಕೆ 10 ಸಾವಿರ ಕೋಟಿ ಕೊಡುತ್ತೇವೆ ಎಂದರು. ಆದರೆ ಏನಾಯ್ತು?. ಇಡೀ 5 ವರ್ಷ 7500 ಸಾವಿರ ಕೋಟಿ ಖರ್ಚು ಮಾಡಿದರು.
ವರ್ಷಕ್ಕೆ 10 ಸಾವಿರ ಕೋಟಿ ಕೊಡಲಿಲ್ಲ. ಹಾಗೇಯೇ ನೀರಾವರಿ ಯೋಜನೆ ಬಗ್ಗೆ ಬದ್ಧತೆ ಕಾಂಗ್ರೆಸ್ಗೆ ಇಲ್ಲ. ನಾವು ಯೋಜನೆ ಮಾಡುತ್ತೇವೆ ಎಂದು ನಿನ್ನೆ(ಗುರುವಾರ) ಸಿಎಂ ಹೇಳಿದ್ದಾರೆ. ಈ ಯೋಜನೆಯನ್ನ ಜಾರಿಗೆ ತರುತ್ತೇವೆ ಎಂದರು.
ಕಾನೂನು ಎಲ್ಲರಿಗೂ ಒಂದೇ:
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಅವರ ಮೇಲೆ ಎಫ್ಐಆರ್ ದಾಖಲಾಗಿದೆಯಾ? ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಯ್ದೆ, ಕಾನೂನು ಎಲ್ಲರಿಗೂ ಒಂದೇ ಇರುತ್ತದೆ. ಕಾಂಗ್ರೆಸ್ನವರಿಗೆ, ಬಿಜೆಪಿಯವರಿಗೆ, ಜೆಡಿಎಸ್ ನವರಿಗೆ ಎಂದು ಬೇರೆ ಬೇರೆ ಇಲ್ಲ. ಯಾರು ನಿಯಮ ಉಲ್ಲಂಘನೆ ಮಾಡುತ್ತಾರೋ ಅವರೆಲ್ಲರ ವಿರುದ್ಧವೂ ಪ್ರಕರಣ ದಾಖಲಾಗಲಿದೆ ಎಂದರು.
ಇದನ್ನೂ ಓದಿ: ಮೇಲ್ಮನೆ ರಾಜಕೀಯ ಪುನರ್ವಸತಿ ಕೇಂದ್ರವಾಗುತ್ತಿರುವುದು ದುರದೃಷ್ಟಕರ: ಬಸವರಾಜ ಹೊರಟ್ಟಿ