ಬೆಂಗಳೂರು: ರಾಜ್ಯದಲ್ಲಿ ಲಾಕ್ಡೌನ್ ಮಾಡುವುದಿಲ್ಲ. ಏಪ್ರಿಲ್ 18 ರಂದು ಸರ್ವ ಪಕ್ಷ ನಾಯಕರ ಸಭೆ ನಡೆಸಿ ಮುಂದಿನ ಕ್ರಮದ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ 130ನೇ ಜನ್ಮ ದಿನಾಚರಣೆ ಅಂಗವಾಗಿ ವಿಧಾನಸೌಧದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಸಿಎಂ ಯಡಿಯೂರಪ್ಪ ಮಾಲಾರ್ಪಣೆ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಏಪ್ರಿಲ್ 18 ರಂದು ಸಂಜೆ 4 ಗಂಟೆಗೆ ಸರ್ವಪಕ್ಷ ಸಭೆ ಕರೆದಿದ್ದೇನೆ. ಆ ಸಭೆಯಲ್ಲಿ ಲಾಕ್ಡೌನ್ ಬಿಟ್ಟು ಉಳಿದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಮಹಾರಾಷ್ಟ್ರದಲ್ಲಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ. ಅಲ್ಲಿನ ಮತ್ತು ಇಲ್ಲಿನ ಪರಿಸ್ಥಿತಿಗಳ ಬಗ್ಗೆ ಸಮಾಲೋಚನೆ ನಡೆಸುತ್ತೇವೆ ಎಂದರು.
ನಿನ್ನೆ ಅಧಿಕಾರಿಗಳ ಸಭೆ ನಡೆಸಿ ಇಲ್ಲಿಯ ಪರಿಸ್ಥಿತಿ ಬಗ್ಗೆ ಚರ್ಚೆ ಮಾಡಲಾಗಿದೆ. ಲಾಕ್ಡೌನ್ ಬಿಟ್ಟು ಉಳಿದೆಲ್ಲ ಕೆಲಸ ಮಾಡಬೇಕು ಎನ್ನುವುದು ನಮ್ಮ ಮನಸ್ಸಿನಲ್ಲಿದೆ. ಅಗತ್ಯವಿದ್ದರೆ ಇನ್ನೊಂದೆರಡು ಜಿಲ್ಲೆಗೆ ನೈಟ್ ಕರ್ಫ್ಯೂ ವಿಸ್ತರಿಸುತ್ತೇವೆ.
ರಾಜ್ಯದಲ್ಲಿ ವೀಕೆಂಡ್ ಲಾಕ್ಡೌನ್ ಜಾರಿ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಅಂತಹ ಪ್ರಸ್ತಾಪವೂ ಸದ್ಯ ಸರ್ಕಾರದ ಮುಂದಿಲ್ಲ. ಲಾಕ್ಡೌನ್ ಹೊರತುಪಡಿಸಿ ಇತರ ಎಲ್ಲಾ ಕಟ್ಟುನಿಟ್ಟಿನ ಕ್ರಮಗಳ ಕುರಿತು ಏನೆಲ್ಲಾ ಮಾಡಬೇಕು ಎನ್ನುವ ಬಗ್ಗೆ ಸರ್ವ ಪಕ್ಷ ನಾಯಕರ ಸಭೆ ನಡೆಸಿ ಅವರ ಅಭಿಪ್ರಾಯ ಪಡೆದು ನಂತರವೇ ನಿರ್ಧರಿಸಲಾಗುತ್ತದೆ ಎಂದು ಸಿಎಂ ಸ್ಪಷ್ಟಪಡಿಸಿದರು.