ಬೆಂಗಳೂರು: ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಮತ್ತೊಮ್ಮೆ ಲಾಕ್ಡೌನ್ ಹೇರಿಕೆ ಮಾಡಲಾಗುತ್ತದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಇದೀಗ ಸಚಿವ ಆರ್.ಅಶೋಕ್ ಅದಕ್ಕೆ ಸ್ಪಷ್ಟನೆ ನೀಡಿದ್ದು, ಯಾವುದೇ ಕಾರಣಕ್ಕೂ ಲಾಕ್ಡೌನ್ ಹೇರಿಕೆ ಇಲ್ಲ ಎಂದಿದ್ದಾರೆ. ಸಚಿವ ಸಂಪುಟದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಮಾಹಿತಿ ಹೊರಹಾಕಿದರು.
ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಬಿಬಿಎಂಪಿ ಎಲ್ಲ ರೀತಿಯ ಕ್ರಮ ಕೈಗೊಂಡಿದ್ದು, ಈಗಾಗಲೇ 100 ಆ್ಯಂಬುಲೆನ್ಸ್ ಸೇವೆ ಒದಗಿಸಲು ಕ್ರಮ ಕೈಗೊಂಡಿದ್ದೇವೆ. ಎರಡು ವಾರ್ಡ್ಗಳಿಗೆ ಒಂದು ಆ್ಯಂಬುಲೆನ್ಸ್ ನೀಡಲಾಗುವುದು ಎಂದಿರುವ ಅವರು, ಖಾಸಗಿ ಆಸ್ಪತ್ರೆಗಳೊಂದಿಗೆ ನಾನೇ ಸಭೆ ನಡೆಸಿ, 5 ಸಾವಿರ ಬೆಡ್ ನೀಡಲು ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ನಾಳೆ ಖಾಸಗಿ ಆಸ್ಪತ್ರೆ ವೈದ್ಯರೊಂದಿಗೆ ಸಭೆ ನಡೆಸಿ, ಅವರೊಂದಿಗೆ ಚರ್ಚೆ ನಡೆಸುವೆ ಎಂದಿರುವ ಅಶೋಕ್, ಸೋಂಕಿತರನ್ನ 6-8 ಗಂಟೆಯೊಳಗೆ ಆಸ್ಪತ್ರೆಗೆ ದಾಖಲು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.
ಕೊರೊನಾದೊಂದಿಗೆ ನಾವು ಮುಂದುವರಿಯಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದ್ದು, ಹೀಗಾಗಿ ಬೆಂಗಳೂರಿನಲ್ಲಿ ಲಾಕ್ಡೌನ್ ಬೇಡ ಎಂದು ಎಲ್ಲರು ಅಭಿಪ್ರಾಯಪಟ್ಟಿದ್ದಾರೆ ಎಂದು ಇದೇ ವೇಳೆ ತಿಳಿಸಿದರು. ಒಂದು ವೇಳೆ ಲಾಕ್ಡೌನ್ ಜಾರಿಗೊಳಿಸಿದರೆ ಶ್ರಮಿಕ ವರ್ಗಕ್ಕೆ ಇದರಿಂದ ಮತ್ತಷ್ಟು ತೊಂದರೆಯಾಗುವ ಸಾಧ್ಯತೆ ಇರುತ್ತದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಿನ್ನೆ ಕೂಡ 173 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1678 ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಲಾಕ್ಡೌನ್ ಮಾಡುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬಂದಿದ್ದವು.