ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವರ್ಷದಿಂದ ವರ್ಷಕ್ಕೆ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಪೈಕಿ ಹೆಲ್ಮೆಟ್ ಹಾಕಿಕೊಳ್ಳದ ಪರಿಣಾಮ ಅಪಾರ ಸಂಖ್ಯೆಯಲ್ಲಿ ಸಾವು ನೋವುಗಳು ಸಂಭವಿಸುತ್ತಿವೆ. ಈ ದಿಸೆಯಲ್ಲಿ ಅಪಘಾತ ಪ್ರಮಾಣ ಕಡಿಮೆ ಮಾಡಲು ಬೆಂಗಳೂರು ನಗರ ಪೊಲೀಸರು ಇಂದಿನಿಂದ ನೋ.. ಹೆಲ್ಮೆಟ್ ನೋ.. ಪೆಟ್ರೋಲ್ ನಿಯಮ ಜಾರಿಗೆ ತಂದಿದ್ದಾರೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ 44 ಸಂಚಾರಿ ಪೊಲೀಸ್ ಠಾಣೆಗಳಿಂದ ಸುಮಾರು 500ಕ್ಕೂ ಹೆಚ್ಚು ಪೆಟ್ರೋಲ್ ಬಂಕ್ಗಳಿವೆ. ಈಗಾಗಲೇ ಬೆಂಗಳೂರು ಪೆಟ್ರೋಲ್ ಡೀಲರ್ಸ್ ಅಸೋಸಿಯೇಷನ್ ನೈತಿಕ ಬೆಂಬಲ ನೀಡಿ ಅನುಷ್ಠಾನಕ್ಕೆ ತಂದಿದೆ. ಕೆಲ ಪೆಟ್ರೋಲ್ ಬಂಕ್‌ಗಳ ಮುಂದೆ ಹೆಲ್ಮೆಟ್ ಧರಿಸಿಲ್ಲವೆಂದರೆ ಪೆಟ್ರೋಲ್ ಸಿಗುವುದಿಲ್ಲ ಎಂದು ಬೋರ್ಡ್ ಹಾಕಿ ಸವಾರರಿಗೆ ಜಾಗೃತಿ ಮೂಡಿಸುತ್ತಿದೆ. ಜಾರಿಯಾದ ಮೊದಲ ದಿನವೇ ಸಂಪೂರ್ಣವಾಗಿ ನಿಯಮ ಅನ್ವಯಿಸದಿದ್ದರೂ ಅಲ್ಲಲ್ಲಿ ನಿಯಮ ಜಾರಿ ಬಗ್ಗೆ ಕೆಲ ಪೆಟ್ರೋಲ್ ಬಂಕ್ ಸಿಬ್ಬಂದಿ ನಾಗರಿಕರಿಗೆ ಹೆಲ್ಮೆಟ್ ಮಹತ್ವದ ಬಗ್ಗೆ ಅರಿವು ಮೂಡಿಸುತ್ತಿರುವುದು ಕಂಡು ಬಂತು.
ನಿಯಮ ಜಾರಿ ಬಂದ ಮೊದಲ ದಿನವೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸುತ್ತಾರೆ ಸಂಚಾರಿ ಪೊಲೀಸರು.