ಬೆಂಗಳೂರು: ರಾಜ್ಯದಲ್ಲಿ 30 ಜಿಲ್ಲೆಗಳಲ್ಲೂ ಕೊರೊನಾ ಸೋಂಕಿದೆ. ಆದರೆ, ಮಂಡ್ಯ, ಚಾಮರಾಜನಗರ, ಚಿತ್ರದುರ್ಗ ಈ ಮೂರು ಜಿಲ್ಲೆಗಳಲ್ಲಿ ಮಾತ್ರ ಈವರೆಗೂ ಕೊರೊನಾ ಸೋಂಕಿನಿಂದ ಯಾರೊಬ್ಬರೂ ಕೂಡ ಸಾವನ್ನಪ್ಪಿಲ್ಲ. ಸೋಂಕಿತರೆಲ್ಲರೂ ವೈರಸ್ ವಿರುದ್ಧ ಹೋರಾಡಿ ಗೆದ್ದು ಬರುತ್ತಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಈವರೆಗೆ 661 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಇದರಲ್ಲಿ 431 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 230 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 141 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, 49 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 92 ಸಕ್ರಿಯ ಪ್ರಕರಣಗಳಿದ್ದರೂ ಕೂಡಾ ಯಾವೊಬ್ಬ ಸೋಂಕಿತ ವ್ಯಕ್ತಿಯೂ ಮೃತಪಟ್ಟಿಲ್ಲ.
ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 94 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಇದರಲ್ಲಿ 70 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 24 ಸಕ್ರಿಯ ಪ್ರಕರಣಗಳಿದ್ದು, ಯಾವೊಬ್ಬ ಸೋಂಕಿತ ವ್ಯಕ್ತಿಯೂ ಈ ಮಹಾಮಾರಿ ಸೋಂಕಿಗೆ ಬಲಿಯಾಗಿಲ್ಲ.
ಕನಿಷ್ಠ ಸಾವಿನ ಜಿಲ್ಲೆ : ಯಾದಗಿರಿ, ಕೊಡಗು ಜಿಲ್ಲೆಯಲ್ಲಿ ತಲಾ ಒಬ್ಬರು, ಕೋಲಾರ, ಕೊಪ್ಪಳ ಜಿಲ್ಲೆಗಳಲ್ಲಿ ತಲಾ ಇಬ್ಬರು, ಹಾವೇರಿ, ಉಡುಪಿ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ ಮೂವರು, ಶಿವಮೊಗ್ಗ ಜಿಲ್ಲೆಯಲ್ಲಿ ಒಬ್ಬ ಸೋಂಕಿತ ಕೊರೊನಾದಿಂದ ಮೃತಪಟ್ಟಿದ್ದಾರೆ. ಇವು ಐದಕ್ಕಿಂತ ಕಡಿಮೆ ಸಾವು ಸಂಭವಿಸಿದ ಜಿಲ್ಲೆಗಳಾಗಿವೆ.
ಜಿಲ್ಲೆಗಳ ಅಂಕಿ ಅಂಶ: ಇಂದು 29 ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾದ್ರೂ ಚಿತ್ರದುರ್ಗದಲ್ಲಿ ಮಾತ್ರ ಯಾರಿಗೂ ಇವತ್ತು ಸೋಂಕು ತಗುಲಿಲ್ಲ. ಅತಿ ಹೆಚ್ಚು ಅಂದ್ರೆ 1447 ಪ್ರಕರಣ ಬೆಂಗಳೂರು ನಗರದಲ್ಲಿ ದೃಢಪಟ್ಟಿವೆ. 100 ಕ್ಕಿಂತ ಹೆಚ್ಚು 1 ಜಿಲ್ಲೆ, 50-100ರವರೆಗೆ 5 ಜಿಲ್ಲೆ,10-50ರವರೆಗೆ 13 ಜಿಲ್ಲೆ, 0-10 ರವರೆಗೆ 10 ಜಿಲ್ಲೆಗಳಲ್ಲಿ ಸೋಂಕು ಕಾಣಿಸಿದೆ.