ಬೆಂಗಳೂರು: ನಾವು ಅತ್ಯಂತ ಪ್ರಾಮಾಣಿಕತೆಯಿಂದ ಡ್ರಗ್, ಮನಿಲಾಂಡರಿಂಗ್ ಹಾಗು ಬಿಟ್ಕಾಯಿನ್ ಪ್ರಕರಣಗಳ ತನಿಖೆ ಮಾಡುತ್ತಿದ್ದೇವೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ, ಕಾನೂನು ಪ್ರಕಾರವೇ ಎಲ್ಲವೂ ನಡೆಯಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
‘ಆಧಾರವಿಟ್ಟುಕೊಂಡು ಮಾತಾಡಬೇಕು’
ಆರ್.ಟಿ.ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಬಿಟ್ ಕಾಯಿನ್ ದಂಧೆಯಲ್ಲಿ ಭಾಗಿಯಾಗಿರುವ ಪ್ರಭಾವಿಗಳನ್ನು ರಕ್ಷಿಸುವ ಹುನ್ನಾರ ನಡೆಯುತ್ತಿದೆ ಅನ್ನೋ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸಿದ್ದರಾಮಯ್ಯನವರು ಸಾಕ್ಷ್ಯ ಇಟ್ಟು ಮಾತಾಡಬೇಕು. ಸುಖಾಸುಮ್ಮನೆ ಆರೋಪ ಮಾಡುವುದು ತರವಲ್ಲ. ಅವರ ಬಳಿ ಸಾಕ್ಷಿ ಇದ್ದರೆ ಕೊಡಲಿ, ಅದನ್ನೂ ತನಿಖೆ ಮಾಡುತ್ತೇವೆ. ಸೂತ್ರವಿಲ್ಲದೆ ಪಟ ಬಿಡಲು ಹೋಗಬಾರದು ಎಂದು ವಿಪಕ್ಷ ನಾಯಕರಿಗೆ ಸಿಎಂ ಬೊಮ್ಮಾಯಿ ಟಾಂಗ್ ಕೊಟ್ಟರು.
ನಾನು ಡ್ರಗ್ ವಿರುದ್ಧ ವಾರ್ ಡಿಕ್ಲೇರ್ ಮಾಡಿದ್ದೇನೆ. ಕಳೆದ ಎರಡೂವರೆ ವರ್ಷದಿಂದ ಅತಿ ಹೆಚ್ಚು ಡ್ರಗ್ ಸೀಜ್ ಮಾಡಲಾಗಿದೆ. ಕಾನೂನಿನನ್ವಯ ಆರೋಪಿಗಳು ತಪ್ಪಿಸಿಕೊಳ್ಳದಂತೆ ಕೇಸ್ ಹಾಕಲಾಗಿದೆ. ಪ್ರಥಮ ಬಾರಿಗೆ ನಮ್ಮ ರಾಜ್ಯ ಡ್ರಗ್ ವಿರುದ್ಧ ದೊಡ್ಡ ಹೋರಾಟ ನಡೆಸಿದೆ ಎಂದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ ಜತೆಗೆ ಹ್ಯಾಕಿಂಗ್ ಮಾಡುತ್ತಿದ್ದ ಶ್ರೀಕೃಷ್ಣನನ್ನು ಬಂಧಿಸಲಾಗಿದೆ ಎಂದರು. 2018 ರ ಫೆಬ್ರವರಿಯಲ್ಲಿ ಶ್ರೀಕೃಷ್ಣ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದು, ಆತನ ವಿರುದ್ಧ ಕೇಸ್ ಫೈಲ್ ಆಗಿರುತ್ತದೆ. ಆತನ ಜತೆಯಿದ್ದ ಐದಾರು ಜನರ ಬಂಧನವಾಗುತ್ತದೆ. ಆದರೆ, ಶ್ರೀಕೃಷ್ಣನ ಬಂಧನ ಆಗಿರಲಿಲ್ಲ. ಆಗ ಯಾವ ಸರ್ಕಾರವಿತ್ತು ಅನ್ನೋದನ್ನ ಗಮನಿಸಿ. ನಂತರ ಆತನಿಗೆ ಬೇಲ್ ಸಿಗುತ್ತೆ, ಬೇಲ್ ಸಿಕ್ಕ ಬಳಿಕವೂ ಕರೆಸಿ ವಿಚಾರಣೆ ಮಾಡಲ್ಲ. ಯುಬಿ ಸಿಟಿ ದಾಂಧಲೆ ಪ್ರಕರಣದಲ್ಲಿ ಆತನ ಬಂಧನವಾಗಿರುತ್ತದೆ. ಆಗಲೇ ಸರಿಯಾಗಿ ವಿಚಾರಣೆ ಮಾಡಿದ್ದಿದ್ರೆ, ಆತನ ಇತರೆ ದುಷ್ಕೃತ್ಯ, ಡ್ರಗ್ ವಿಚಾರ ಬಯಲಿಗೆ ಬರ್ತಿತ್ತು ಎಂದು ಕಾಂಗ್ರೆಸ್ಗೆ ತಿರುಗೇಟು ನೀಡಿದರು.
2020ರಲ್ಲಿ ಶ್ರೀ ಕೃಷ್ಣನ ಬಂಧನ
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅವನ ದುಷ್ಕೃತ್ಯಗಳನ್ನು ಬಯಲಿಗೆಳೆದಿದ್ದು, ಆತನನ್ನು ಬಂಧಿಸಲಾಯ್ತು. ಆತ, ಮನಿ ಲಾಂಡರಿಂಗ್, ಹ್ಯಾಕಿಂಗ್, ಡ್ರಗ್ ಕೇಸ್ನಲ್ಲಿ ಶಾಮೀಲಾಗಿದ್ದಾನೆ. 2021 ರ ಮಾರ್ಚ್ 3 ರಂದು ನಾವು ಇಡಿಗೆ ಮನಿ ಲಾಂಡರಿಂಗ್ ಕೇಸ್ ಶಿಫಾರಸು ಮಾಡಿದ್ದೇವೆ. ತನಿಖೆ ನಡೀತಿದ್ದು, ನಮ್ಮ ಪೋರ್ಟಲ್ ಸಹ ಆತ ಹ್ಯಾಕ್ ಮಾಡಿದ್ದ. ಇದನ್ನ ಸಿಐಡಿ ತನಿಖೆ ಮಾಡುತ್ತಿದೆ. ಏಪ್ರಿಲ್ 28 ರಂದು ಸಿಬಿಐನ ಇಂಟರ್ ಪೋಲ್ ಬ್ರಾಂಚ್ಗೂ ಕೇಸ್ ತನಿಖೆಗೆ ಶಿಫಾರಸು ಮಾಡಿದ್ದೇವೆ. ಸರ್ಕಾರ ಯಾರ ರಕ್ಷಣೆಯನ್ನೂ ಮಾಡುತ್ತಿಲ್ಲ ಎನ್ನುವ ಕುರಿತು ಸ್ಪಷ್ಟೀಕರಣ ನೀಡಿದರು.
ರಸ್ತೆ ಗುಂಡಿ ಮುಚ್ಚಲು ಸೂಚನೆ
ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಹಾವಳಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ, ಒಂದು ವಾರದಲ್ಲಿ ರಸ್ತೆ ಗುಂಡಿ ಮುಚ್ಚುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚನೆ ಕೊಟ್ಟಿದ್ದೇನೆ. ಒಂದು ವಾರದ ಬಳಿಕ ನಗರ ಸಂಚಾರ ಮಾಡಿ ಆ ಬಗ್ಗೆ ಅವಲೋಕನ ಮಾಡುತ್ತೇನೆ ಎಂದರು.
ಸದ್ಯದಲ್ಲೇ ದೀಪಾವಳಿ ಗೈಡ್ ಲೈನ್ಸ್
ದೀಪಾವಳಿ ಗೈಡ್‌ಲೈನ್ಸ್ ಬಗ್ಗೆ ಸುಪ್ರೀಂಕೋರ್ಟ್ ಆದೇಶವಿದೆ. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ರು.
ಇದನ್ನೂ ಓದಿ: 'ನನ್ನ ಪಕ್ಷದ ಬಾಗಿಲು ಮುಚ್ಚಿದೆ': ಕಾಂಗ್ರೆಸ್ ಸೇರ್ಪಡೆ ಖಚಿತಪಡಿಸಿದ ಎಸ್.ಆರ್.ಶ್ರೀನಿವಾಸ್