ಬೆಂಗಳೂರು: ಚಾಮರಾಜನಗರದಲ್ಲಿ ಮೃತಪಟ್ಟವರಿಗೆ ಪರಿಹಾರವನ್ನೇ ಕೊಟ್ಟಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಸರ್ಕಾರ ಯಾರಿಗೂ ಪರಿಹಾರ ಕೊಟ್ಟಿಲ್ಲ. ತನಿಖಾ ವರದಿ ಬಂದ ಮೇಲೆ ಪರಿಹಾರ ಕೊಡ್ತೀವಿ ಎಂದು ಹೇಳಿದರು.
ಆಕ್ಸಿಜನ್ ಕೊರತೆಯಿಂದ ಯಾರೂ ಮೃತಪಟ್ಟಿಲ್ಲ ಎಂದು ಸಂಸತ್ನಲ್ಲಿ ಕೇಂದ್ರದ ಉತ್ತರ ವಿಚಾರವಾಗಿ ಮಾತನಾಡುತ್ತಾ, ಆಕ್ಸಿಜನ್ ಕೊರತೆಯಿಂದ ಮರಣ ಹೊಂದಿದ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ತನಿಖೆಯ ವರದಿ ಬರೋವರೆಗೂ ನಾವು ಏನನ್ನೂ ಹೇಳಬಾರದು. ಯಾಕೆಂದರೆ ನ್ಯಾಯಾಂಗ ಸಮಿತಿಯು ತನಿಖೆ ಮಾಡುತ್ತಿದೆ. ಈ ತನಿಖಾ ವರದಿ ಬಂದ ಬಳಿಕ ಕೇಂದ್ರಕ್ಕೆ ವರದಿ ಕೊಡಲಾಗುತ್ತದೆ ಎಂದರು.
ಚಾಮರಾಜನಗರ ದುರಂತದಲ್ಲಿ ಮಡಿದವರಿಗೆ ಈಗಾಗಲೇ 2 ಲಕ್ಷ ಪರಿಹಾರ ಕೊಟ್ಟಿದೆ. ಮೇ 22ರಂದು 24 ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರ ಕೊಡಲಾಗಿದೆ. ಬಳಿಕ ಜುಲೈ 6 ರಂದು ಪರಿಹಾರ ಮೊತ್ತ 5 ಲಕ್ಷ ಕೊಡಲು ಹೈಕೋರ್ಟ್ ಆದೇಶಿಸಿತ್ತು. ಇಷ್ಟಾದರೂ ಪರಿಹಾರ ಕೊಟ್ಟೇ ಇಲ್ಲ ಅಂತ ಸುಧಾಕರ್ ಹೇಳಿಕೆ ಕೊಟ್ಟಿರುವುದು ಅಚ್ಚರಿ ಮೂಡಿಸಿದೆ.