ಬೆಂಗಳೂರು: ಗುಜರಾತ್ ಮಾದರಿಯಲ್ಲಿ ಸಂಪೂರ್ಣವಾಗಿ ಟ್ರಾಫಿಕ್ ದಂಡ ಪರಿಷ್ಕರಿಸಲು ಅಸಾಧ್ಯವೆಂದು ಸಲಹೆ ನೀಡಿರುವ ಕಾನೂನು ಇಲಾಖೆ, ಕೇಂದ್ರ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯಲ್ಲಿ ಕೆಲ ತಿದ್ದುಪಡಿ ತರಬಹುದಾಗಿದೆ ಎಂದು ತಿಳಿಸಿದೆ.
ಹೀಗಾಗಿ ಟ್ರಾಫಿಕ್ ದಂಡ ಇಳಿಸುವ ಸಂಬಂಧ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸುವುದು ಇನ್ನೂ ವಿಳಂಬವಾಗುವ ಸಾಧ್ಯತೆಯಿದೆ.
ಕಾನೂನು ಇಲಾಖೆ ಅಭಿಪ್ರಾಯ ಏನು?:
ಕಾನೂನು ಇಲಾಖೆ ದಂಡ ಪರಿಷ್ಕರಿಸಿ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರುವ ಸಂಬಂಧ ಸೆಪ್ಟಂಬರ್ 19ರಂದು ತನ್ನ ಅಭಿಪ್ರಾಯವನ್ನು ಸಾರಿಗೆ ಇಲಾಖೆಗೆ ಸಲ್ಲಿಸಿದೆ.
ಅದರಲ್ಲಿ ಕೇಂದ್ರ ಮೋಟಾರು ಕಾಯ್ದೆಗೆ ಅನುಗುಣವಾಗಿ ಕೆಲ ತಿದ್ದುಪಡಿ ಮಾಡಬಹುದಾಗಿದೆ. ಆದರೆ, ಕೆಲ ಷರತ್ತುಗಳಿಗೆ ಒಳಪಟ್ಟಿದೆ ಎಂಬ ಅಭಿಪ್ರಾಯವನ್ನು ತಿಳಿಸಿದೆ.
ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 200ರಲ್ಲಿ ಬರುವ ಕೆಲ ಅಪರಾಧಗಳಿಗೆ ಸಂಬಂಧಿತ ಸೆಕ್ಷನ್ಗಳಿಗೆ ತಿದ್ದುಪಡಿ ಮಾಡಬಹುದಾಗಿದೆ ಎಂದು ತಿಳಿಸಿದೆ.
ಸೆಕ್ಷನ್ 200 ಅಡಿ ಬರುವ ಕೆಲ ಸಣ್ಣ ಪ್ರಮಾಣದ ಅಪರಾಧಗಳಿಗೆ ಸಂಬಂಧಿಸಿದ 24 ಸೆಕ್ಷನ್ಗಳಾದ 177, 178, 179, 180, 181, 182(1), 183(2), 184, 186, 191, 192, 194, 196, 198ರಡಿಯ ಅಪರಾಧ ಪ್ರಕರಣಗಳ ಶಿಕ್ಷೆ ಅಥವಾ ದಂಡ ಪ್ರಮಾಣದಲ್ಲಿ ರಾಜಿ ಮಾಡಬಹುದಾಗಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಬಹುದಾಗಿದೆ ಎಂದು ಕಾನೂನು ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಹೀಗಾಗಿ ಡ್ರಂಕ್ ಅಂಡ್ ಡ್ರೈವ್, ಒನ್ ವೇ ಡ್ರೈವಿಂಗ್, ಬೇಕಾಬಿಟ್ಟಿ ವಾಹನ ಚಾಲನೆ, ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಸೇರಿದಂತೆ ಗಂಭೀರ ಸ್ವರೂಪದ ಪ್ರಕರಣಗಳ ಶಿಕ್ಷೆ, ದಂಡ ಪ್ರಮಾಣ ಪರಿಷ್ಕರಿಸಲು ಸಾಧ್ಯವಿಲ್ಲ ಎಂಬ ಸಲಹೆಯನ್ನು ನೀಡಲಾಗಿದೆ. ಕಾಯ್ದೆಯ ಕೆಲ ಸೆಕ್ಷನ್ಗಳು ಸಮವರ್ತಿ ಪಟ್ಟಿಯಡಿ(concurrent list)ಬರುವುದರಿಂದ ಒಂದು ವೇಳೆ ರಾಜ್ಯ ಸರ್ಕಾರ ಕೆಲ ನಿಯಮಗಳಿಗೆ ತಿದ್ದುಪಡಿ ತಂದರೂ ಕೇಂದ್ರ ಸರ್ಕಾರ ಆ ತಿದ್ದುಪಡಿಯನ್ನು ರದ್ದುಗೊಳಿಸಬಹುದಾಗಿದೆ ಎಂಬ ಸ್ಪಷ್ಟ ಅಭಿಪ್ರಾಯವನ್ನು ತಿಳಿಸಲಾಗಿದೆ.
ಕೆಲ ಸೆಕ್ಷನ್ ಸಂಬಂಧ ತಿದ್ದುಪಡಿ ತರುವ ನಿಟ್ಟಿನಲ್ಲಿ ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆಯ ಅಭಿಪ್ರಾಯ ಪಡೆಯುವುದು ಸೂಕ್ತ ಎಂದು ಕಾನೂನು ಇಲಾಖೆ ಸ್ಪಷ್ಟಪಡಿಸಿದೆ.
ಸವದಿ ನೇತೃತ್ವದಲ್ಲಿ ಸಭೆ ಅಪೂರ್ಣ:
ದಂಡ ಕಡಿಮೆಗೊಳಿಸುವ ಸಂಬಂಧ ಸೆಪ್ಟಂಬರ್ 20ರಂದು ಡಿಸಿಎಂ ಲಕ್ಷ್ಮಣ್ ಸವದಿ ನೇತೃತ್ವದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಲಾಯಿತು. ಕಾನೂನು ಇಲಾಖೆ ಗುಜರಾತ್ ಮಾದರಿಯಲ್ಲಿ ಕಾಯ್ದೆ ತಿದ್ದುಪಡಿಗೆ ಒಲವು ತೋರದ ಹಿನ್ನೆಲೆ ಸ್ಪಷ್ಟ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಅಧಿಕಾರಿಗಳಲ್ಲೇ ಗೊಂದಲ ಇರುವ ಹಿನ್ನೆಲೆ, ಸಂಸದೀಯ ವ್ಯವಹಾರಗಳು ಹಾಗೂ ಶಾಸಕ ರಚನೆ ಇಲಾಖೆಯ ಅಭಿಪ್ರಾಯ ಪಡೆದು, ಬಳಿಕ ಅಂತಿಮ ತೀರ್ಮಾನಕ್ಕೆ ಬರಲು ನಿರ್ಧರಿಸಲಾಗಿದೆ.