ಗಂಗಾವತಿ: 12 ವರ್ಷಕ್ಕೊಮ್ಮೆ ಇಲ್ಲಿನ ತುಂಗಭದ್ರಾ ನದಿಯಲ್ಲಿ ನಡೆಯುವ ಪವಿತ್ರ ಪುಷ್ಕರ ಸ್ನಾನಕ್ಕೆ ಈ ಬಾರಿ ಬ್ರೇಕ್ ಬಿದ್ದಿದೆ. ಕೊರೊನಾ ಭೀತಿ ಹಿನ್ನೆಲೆ ಪುಷ್ಕರ ಸ್ನಾನಕ್ಕೆ ತಡೆ ನೀಡಿ ಜಿಲ್ಲಾಧಿಕಾರಿ ವಿಕಾಸ್ ಸುರಳಕರ್ ಆದೇಶ ಹೊರಡಿಸಿದ್ದಾರೆ.
ತುಂಗಭದ್ರಾ ನದಿಯಲ್ಲಿ ನ.20ರಿಂದ ಡಿಸೆಂಬರ್ 1ರವರೆಗೆ ಒಟ್ಟು 13 ದಿನಗಳ ಧಾರ್ಮಿಕ ಕಾರ್ಯ ಕೈಗೊಳ್ಳಲು ಅನುಕೂಲ ಕಲ್ಪಿಸುವಂತೆ ಸಾಮಾಜಿಕ ಕಾರ್ಯಕರ್ತರೊಬ್ಬರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ತುಂಗಭದ್ರಾ ನದಿ ತಟದಲ್ಲಿರುವ ಗಂಗಾವತಿ ತಾಲೂಕಿನ ಆನೆಗೊಂದಿ ಚಿಕ್ಕಜಂತಕಲ್ ಹಾಗೂ ಕಾರಟಗಿ ತಾಲೂಕಿನ ಬೆನ್ನೂರು ಮತ್ತು ಮುಸ್ಟೂರು ಗ್ರಾಮಗಳಲ್ಲಿ ಭಕ್ತರಿಗೆ ಸ್ನಾನ ಮಾಡಲು ಅವಕಾಶ ಸೇರಿದಂತೆ ಭದ್ರತೆ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು.
ಪುಷ್ಕರ ಸ್ನಾನದ ವೇಳೆ ಸಾವಿರಾರು ಜನ ಸೇರುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯದಲ್ಲಿ ಕೋವಿಡ್ ಇರುವ ಕಾರಣ ಹಾಗೂ ಯಾವುದೇ ಕಾರ್ಯಕ್ರಮಕ್ಕೆ ಒಂದು ನೂರು ಜನರಿಗಿಂತ ಹೆಚ್ಚು ಸೇರಲು ಅವಕಾಶ ಇಲ್ಲ. ಹೀಗಾಗಿ ನದಿಯಲ್ಲಿ ಪುಷ್ಕರ ಸ್ನಾನಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿಯವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.