ಬೆಂಗಳೂರು: ನಿತ್ಯಾನಂದನ ವಿರುದ್ಧ ಇರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ಅವರನ್ನು ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸುವ ಬದಲು ಪ್ರಾಸಿಕ್ಯೂಷನ್ ನನ್ನ ವಿರುದ್ಧವೇ ಪ್ರತಿಕೂಲ ಕ್ರಮ ಕೈಗೊಳ್ಳುತ್ತಿದೆ ಎಂದು ಕೆ.ಲೆನಿನ್ ದೂರಿದ್ದಾರೆ.
ರಾಮನಗರ ಜಿಲ್ಲೆಯ ಸೆಷನ್ಸ್ ಕೋರ್ಟ್ ನಲ್ಲಿ ನಡೆಯುತ್ತಿರುವ ಪ್ರಕರಣವನ್ನು ಬೇರೆ ಒಂದು ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂದು ಕೆ.ಲೆನಿನ್ ಸಲ್ಲಿಸಿರುವ ಕೋರಿಕೆಯ ಅರ್ಜಿಯನ್ನು ನ್ಯಾಯಮೂರ್ತಿಗಳು ಪರಿಶೀಲಿಸಿದರು.
ಲೆನಿನ್ ಪರ ವಾದಿಸಿದ ವಕೀಲರು, ವಿಚಾರಣೆಗೆ ನಿತ್ಯಾನಂದ ಸ್ವಾಮೀಜಿಯನ್ನು ಈತನಕ ಹಾಜರುಪಡಿಸಿಲ್ಲ. ಬದಲಿಗೆ ಸಾಕ್ಷಿದಾರರಿಗೇ ವಾರೆಂಟ್ ಹೊರಡಿಸಲಾಗುತ್ತಿದೆ. ವಾರೆಂಟ್ ರಿಕಾಲ್ ಮಾಡಿಕೊಳ್ಳಲು ಪ್ರಾಸಿಕ್ಯೂಟರ್ ಸಹಕರಿಸುತ್ತಿಲ್ಲ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ರಾಮನಗರ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ವಿರುದ್ಧ ದೂರುದಾರ ಮಾಡಿರುವ ಆರೋಪಗಳ ಬಗ್ಗೆ ವಿವರಣೆ ನೀಡಿ ಎಂದು ರಾಜ್ಯ ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಿ ವಿಚಾರಣೆಯನ್ನು ಡಿ.12ಕ್ಕೆ ಮುಂದೂಡಿದೆ.