ಬೆಂಗಳೂರು: ಕೇರಳ ರಾಜ್ಯಕ್ಕೆ ಅನಗತ್ಯವಾಗಿ ಪ್ರಯಾಣ ಮಾಡದಂತೆ ಸಾರ್ವಜನಿಕರಿಗೆ ಕರ್ನಾಟಕ ಆರೋಗ್ಯ ಸಚಿವಾಲಯವು ಸಲಹೆ ನೀಡಿದೆ. ಗಡಿ ಜಿಲ್ಲೆಗಳಲ್ಲಿ ತೀವ್ರ ಕಣ್ಗಾವಲು ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿದೆ. ನೆರೆಯ ಕೇರಳದಲ್ಲಿ ನಿಫಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಆರೋಗ್ಯ ಸಚಿವಾಲಯ ಗುರುವಾರ ಸುತ್ತೋಲೆ ಹೊರಡಿಸಿದ್ದು, ದಕ್ಷಿಣ ರಾಜ್ಯದ ಪೀಡಿತ ಪ್ರದೇಶಗಳಿಗೆ ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದೆ. ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಕೊಡಗು, ದಕ್ಷಿಣ ಕನ್ನಡ, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಕಣ್ಗಾವಲು ತೀವ್ರಗೊಳಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ.
"ಕೇರಳ ರಾಜ್ಯದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ನಿಫಾನಿಂದ ಇಬ್ಬರು ಸಾವಿಗೀಡಾಗಿದ್ದು, ಒಟ್ಟಾರೆ 4 ನಿಫಾ ಪ್ರಕರಣಗಳು ದೃಢಪಟ್ಟಿವೆ. ಈ ಹಿನ್ನೆಲೆಯಲ್ಲಿ ಸೋಂಕು ಹರಡುವುದನ್ನು ತಡೆಯಲು ಕೇರಳ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕಣ್ಗಾವಲು ಚಟುವಟಿಕೆಗಳನ್ನು ತೀವ್ರಗೊಳಿಸಬೇಕಾಗಿದೆ" ಎಂದು ಸಚಿವಾಲಯ ಸುತ್ತೋಲೆಯಲ್ಲಿ ತಿಳಿಸಿದೆ. ಸೋಂಕು ಹರಡುವುದನ್ನು ತಡೆಗಟ್ಟಲು ಮತ್ತು ಕಣ್ಗಾವಲು ಚಟುವಟಿಕೆಗಳನ್ನು ಕೈಗೊಳ್ಳಲು ಇಲಾಖೆ ರಾಜ್ಯಾದ್ಯಂತ ಆರೋಗ್ಯ ಅಧಿಕಾರಿಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ.
ನಿಫಾ ಮಾರ್ಗಸೂಚಿ:
- ಕರ್ನಾಟಕದಿಂದ ಕೇರಳಕ್ಕೆ ವಿಶೇಷವಾಗಿ ಗಡಿ ಜಿಲ್ಲೆಗಳಲ್ಲಿ ಜ್ವರ ಕಣ್ಗಾವಲಿಗಾಗಿ ಚೆಕ್ ಪೋಸ್ಟ್ಗಳ ಸ್ಥಾಪನೆ
- ರೋಗದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು
- ಜನರಲ್ಲಿ ಅನಗತ್ಯ ಭೀತಿ ತಪ್ಪಿಸುವುದು
- ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಹೆಚ್‌ಸಿ) ಮಟ್ಟದವರೆಗೆ ಆರೋಗ್ಯ ಸಿಬ್ಬಂದಿಗೆ ತರಬೇತಿ
- ನಿಫಾ ಶಂಕಿತ ರೋಗಿಗಳನ್ನು ಕ್ವಾರಂಟೈನ್ ಮಾಡಲು ಜಿಲ್ಲಾ ಆಸ್ಪತ್ರೆಗಳಲ್ಲಿ ಕನಿಷ್ಠ ಎರಡು ಹಾಸಿಗೆ ಮೀಸಲು
- ನೆಗೆಟಿವ್ ಪ್ರೆಶರ್ ಐಸಿಯುಗಳನ್ನು ಗುರುತಿಸುವುದು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಫಾ ಅಲರ್ಟ್ ಘೋಷಣೆ: ಕೇರಳದಲ್ಲಿ ನಿಫಾ ಪ್ರಕರಣಗಳು ದೃಢಪಟ್ಟ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಅಲರ್ಟ್ ಹೊರಡಿಸಲಾಗಿದ್ದು, ಗಡಿ ಸ್ಥಳಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ತೆರೆಯಲು ಆರೋಗ್ಯ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಜಿಲ್ಲೆಯ ಪ್ರಮುಖ ಆರೋಗ್ಯ ಕೇಂದ್ರಗಳಲ್ಲಿ ಪ್ರತ್ಯೇಕ ನಿಫಾ ವಾರ್ಡ್ಗಳನ್ನು ತೆರೆಯಲಾಗಿದೆ ಮತ್ತು ವೈರಸ್ ಹರಡುವುದನ್ನು ತಡೆಯಲು ಇತರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ನಿಫಾ ಒಂದು ಝೂನೋಟಿಕ್ ವೈರಸ್. ಅಂದರೆ ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದು. ಇದು ತೀವ್ರ ಉಸಿರಾಟದ ಸೋಂಕಿಗೆ ಕಾರಣವಾಗಬಹುದು ಮತ್ತು ಮೆದುಳಿಗೂ ಹಾನಿ ಮಾಡಬಹುದು.
ಇದನ್ನೂ ಓದಿ : ಭೂಮಿಯ ಎಲೆಕ್ಟ್ರಾನ್ಗಳಿಂದ ಚಂದ್ರನಲ್ಲಿ ನೀರು; ಚಂದ್ರಯಾನ-1 ಮಾಹಿತಿಯಿಂದ ಸಂಶೋಧನೆ