ಬೆಂಗಳೂರು : ನಟ ಸುದೀಪ್ ಅವರು ಬಿಜೆಪಿ ಪರ ಮತ ಪ್ರಚಾರ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಹಾಗು ನಟ ನಿಖಿಲ್ ಕುಮಾರಸ್ವಾಮಿ, ಚುನಾವಣೆ ಸಂದರ್ಭದಲ್ಲಿ ಸಿನಿಮಾ ನಟರು ಪ್ರಚಾರದಲ್ಲಿ ಭಾಗಿಯಾಗುವುದು ಸಾಮಾನ್ಯ. ಸುದೀಪ್ ಅವರಿಗೆ ಅವರದ್ದೇ ಆದ ಅಭಿಮಾನಿ ಬಳಗ ಇದೆ ಎಂದರು.
ಜೆ.ಪಿ.ನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಅನ್ನುವುದಕ್ಕಿಂತ ಹೆಚ್ಚಾಗಿ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ನನಗೆ ಬಾಂಧವ್ಯ, ಸಂಬಂಧವಿದೆ ಎಂದು ಸುದೀಪ್ ಅವರೇ ಹೇಳಿದ್ದಾರೆ. ಹಾಗಾಗಿ ಅದು ಅವರ ವೈಯಕ್ತಿಕ ವಿಚಾರ ಎಂದು ಹೇಳಿದರು.
ಹೆಚ್.ಡಿ.ದೇವೇಗೌಡರೇ ಸ್ಟಾರ್ ಪ್ರಚಾರಕರು: ಪ್ರಚಾರಕ್ಕೆ ಸಿನಿಮಾ ನಟರನ್ನು ಆಹ್ವಾನಿಸುವಿರಾ ಎಂಬ ಪ್ರಶ್ನೆಗೆ, ನಮ್ಮ ಜೆಡಿಎಸ್ ಕಾರ್ಯಕರ್ತರು ಹಾಗು ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರೇ ನಮ್ಮ ಪಕ್ಷಕ್ಕೆ ಸ್ಟಾರ್ ಪ್ರಚಾರಕರು. ಇದರ ಮೇಲಾಗಿ ಯಾರ ಜೊತೆಗೂ ಮಾತುಕತೆ ಆಗಿಲ್ಲ ಎಂದು ತಿಳಿಸಿದರು
ದತ್ತ ಅವರ ಕಾಂಗ್ರೆಸ್ ಟಿಕೆಟ್ ವಿಚಾರ: ಕಾಂಗ್ರೆಸ್‌ನ ಎರಡನೇ ಪಟ್ಟಿಯಲ್ಲಿ ಮಾಜಿ ಶಾಸಕ ವೈ.ಎಸ್.ವಿ ದತ್ತಗೆ ಟಿಕೆಟ್ ಸಿಗದ ವಿಚಾರಕ್ಕೆ ಪ್ರತಿಕ್ರಿಯಿಸಿದ ನಿಖಿಲ್, ದತ್ತಾ ಅವರು ದೇವೇಗೌಡರ ಗರಡಿಯಲ್ಲಿ ಬೆಳೆದವರು. ರಾಜಕೀಯವಾಗಿ ಅವರ ಜೊತೆ ಬಹಳ ನಂಟು ಇಟ್ಟುಕೊಂಡಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಸಿಗುತ್ತದೆ, ಬೆಲೆ ಸಿಗುತ್ತದೆ ಎಂದು ಆ ಪಕ್ಷಕ್ಕೆ ಹೋದರು. ಆದರೆ, ಕಾಂಗ್ರೆಸ್ ಟಿಕೆಟ್ ಕೊಟ್ಟಿಲ್ಲ. ಈ ವಿಚಾರವಾಗಿ ದತ್ತ ಮತ್ತು ಬೆಂಬಲಿಗರು ಸಭೆ ಮಾಡಿದ್ದಾರೆ. ಅದು ಕಾಂಗ್ರೆಸ್ಗೆ ಬಿಟ್ಟ ವಿಚಾರ, ಮುಂದೆ ಏನಾಗುತ್ತೆ ನೋಡೋಣ ಎಂದರು.
ದತ್ತಾ ಅವರು ಜೆಡಿಎಸ್‌ಗೆ ಮತ್ತೆ ಬಂದರೆ ಸ್ವಾಗತ ಮಾಡುತ್ತಿರಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಅದರ ಬಗ್ಗೆ ಪಕ್ಷದ ವರಿಷ್ಠರು, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಕುಮಾರಸ್ವಾಮಿ ತೀರ್ಮಾನ ಮಾಡುತ್ತಾರೆ. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣೆ ಮಾಡುವುದು ಬಹಳ ಮುಖ್ಯ ಎಂದರು.
ಶೀಘ್ರ 2ನೇ ಪಟ್ಟಿ: ಜೆಡಿಎಸ್‌ನ ಎರಡನೇ ಪಟ್ಟಿ ಅತೀ ಶೀಘ್ರದಲ್ಲೇ ಬಿಡುಗಡೆ ಆಗುತ್ತದೆ. ನಿನ್ನೆ ಕುಮಾರಸ್ವಾಮಿ ಪಿರಿಯಾಪಟ್ಟಣದಲ್ಲಿ ತುಂಬಾ ಹಳ್ಳಿಗಳಿಗೆ ಭೇಟಿ ನೀಡಿದ್ದರಿಂದ ತಡವಾಗಿತ್ತು. ಇವತ್ತು ಸಹ ಕೆಲವೊಂದು ಕ್ಷೇತ್ರಗಳಿಗೆ ಹೋಗಿದ್ದಾರೆ. ಪ್ರಚಾರದಲ್ಲಿ ತೊಡಗಿರುವ ಕಾರಣದಿಂದ ಪಟ್ಟಿ ಬಿಡುಗಡೆ ತಡವಾಗಿದೆ. ಏ.13 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗುವುದರಿಂದ ಇಂದು ಅಥವಾ ನಾಳೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಬಹುದು ಎಂದು ನಿಖಿಲ್ ಕುಮಾರಸ್ವಾಮಿ ಮಾಹಿತಿ ನೀಡಿದರು.
ಇದೇ ವೇಳೆ ಹಾಸನ ಟಿಕೆಟ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಕ್ಷೇತ್ರದ ಟಿಕೆಟ್ ಬಗ್ಗೆ ಪಕ್ಷದ ವರಿಷ್ಠರು, ಕುಮಾರಸ್ವಾಮಿ ಹಾಗೂ ರೇವಣ್ಣ ತೀರ್ಮಾನ ಮಾಡುತ್ತಾರೆ. ವರುಣಾದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದೆ ಎಂಬುದಕ್ಕೆ, ಕಾಂಗ್ರೆಸ್ ಬಿಜೆಪಿನಾ ಎ ಟೀಮ್, ಬಿ ಟೀಮಾ? ಇದರ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
ಇದನ್ನೂ ಓದಿ : ನಂದಿನಿ ಬ್ರ್ಯಾಂಡ್ ಬೆಳೆಯಬೇಕು, ಅಮುಲ್ ಆನ್ಲೈನ್ ಖರೀದಿ ಜನರಿಗೆ ಬಿಟ್ಟದ್ದು: ಶೋಭಾ ಕರಂದ್ಲಾಜೆ