ಬೆಂಗಳೂರು: ಇಂದು ನನಗೆ ತುಂಬಾ ಸಂತೋಷದ ದಿನ, ರೇವತಿ ಸರಳ ಸಂಪ್ರದಾಯಸ್ಥ ಹುಡುಗಿ ಎಂದು ನಿಶ್ಚಿತಾರ್ಥವಾದ ದಿನವೇ ಭಾವಿ ಪತ್ನಿಯನ್ನು ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಹೇಳಿದ್ದಾರೆ.
ನನಗೆ ಹಾಗೂ ರೇವತಿಗೆ ನಮ್ಮ ಅಜ್ಜಿ-ತಾತ ಅವರೇ ಸ್ಪೂರ್ತಿಯಾಗಿದ್ದು, ನಾವೂ ಅವರ ಹಾದಿಯಲ್ಲೇ ಸಾಗಲಿದ್ದೇವೆ. ಅಲ್ಲದೆ ನಮ್ಮ ಎರಡು ಕುಟುಂಬಗಳ ಹಿರಿಯರ ಆಶಯದಂತೆ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ. ಮದುವೆ ಅನ್ನೋದು ಎಲ್ಲರ ಜೀವನದಲ್ಲಿ ಒಂದು ಮಹತ್ತರವಾದ ಘಟ್ಟ. ಕಳೆದ ಕೆಲವು ದಿನಗಳಿಂದ ನಾನು ರೇವತಿ ಜೊತೆ ಮಾತನಾಡುತ್ತಿದ್ದೇನೆ. ರೇವತಿ ಸಂಪ್ರದಾಯಸ್ಥ, ಸುಸಂಸ್ಕೃತ ಗುಣಗಳಿರುವ ಹುಡುಗಿ. ತುಂಬಾ ಚೆನ್ನಾಗಿ ಹೊಂದಿಕೊಂಡು ಹೋಗುತ್ತಾರೆ ಅನ್ನೋ ನಂಬಿಕೆ ಇದೆ ಎಂದರು.
ಮದುವೆ ಸಂದರ್ಭದಲ್ಲಿ ನನ್ನನ್ನ ಪ್ರೀತಿಸುವ ಎಲ್ಲರಿಗೂ ಊಟ ಹಾಕಿಸಬೇಕೆಂಬ ಆಸೆ ಇತ್ತು. ಅದು ಈ ಸಂದರ್ಭದಲ್ಲಿ ಈಡೇರುತ್ತಿದೆ. ಇಂತಹ ಹುಡುಗಿ ಸಿಗಲು ನಾನು ಪುಣ್ಯ ಮಾಡಿದ್ದೆ. ಇಂದಿನಿಂದ ನನ್ನ ಹಾಗೂ ರೇವತಿ ಜೀವನದ ಹೊಸ ಅಧ್ಯಾಯ ಆರಂಭವಾಗಿದೆ ಎಂದರು.
ಇಂದು ನಮ್ಮ ನಿಶ್ಚಿತಾರ್ಥದ ನಂತರ ನಮ್ಮ ತಾತ ಕಾರಿನಲ್ಲಿ ಹೋಗಿ ಕುಳಿತಿದ್ದರು. ನಮ್ಮ ತಾತ ಕಾಯ್ತಿದ್ದಾರೆ ಎಂಬ ವಿಷಯ ಕೇಳಿ ನಮ್ಮಜ್ಜಿ ಚೆನ್ನಮ್ಮ ಒಡೋಡಿ ಹೋದರು. ಇದನ್ನ ನೋಡಿದ್ರೆ, ಅಜ್ಜಿ-ತಾತ ಅವರ ಅನ್ಯೋನ್ಯತೆ ಎಷ್ಟಿದೆ ಎಂಬುದು ತಿಳಿಯುತ್ತೆ. ಸದ್ಯ ಎಲ್ಲಾ ಹಿರಿಯರು ಹಿತೈಷಿಗಳು ನಮಗೆ ಆಶೀರ್ವಾದ ಮಾಡಿದ್ದಾರೆ. ನಾವು ಆದರ್ಶವಾಗಿ ಬಾಳುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.