ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಹೀನಾಯವಾಗಿ ಸೋಲು ಕಂಡ ಹಿನ್ನೆಲೆಯಲ್ಲಿ ಪಕ್ಷದ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಸೋಲೇ ಅಂತಿಮವಲ್ಲ, ಹೊಸ ನಾಯಕತ್ವಕ್ಕೆ ಅವಕಾಶ ಮಾಡಿಕೊಟ್ಟು ಪಕ್ಷ ಸಂಘಟಿಸೋಣ ಎನ್ನುವ ಕರೆ ನೀಡಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿನ ಸೋಲಿನ ಹಿನ್ನೆಲೆಯಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಿಖಿಲ್ ಕುಮಾರಸ್ವಾಮಿ ಅವರು ರಾಜೀನಾಮೆ ಪತ್ರವನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರಿಗೆ ಕಳುಹಿಸಿ ಕೊಟ್ಟಿದ್ದಾರೆ. "ಪ್ರಸಕ್ತ ಚುನಾವಣಾ ಫಲಿತಾಂಶ ನನಗೆ ಅತೀವ ಬೇಸರ ಉಂಟು ಮಾಡಿದೆ ಎನ್ನುವುದರ ಜತೆಗೆ, ಪಕ್ಷವನ್ನು ಹೊಸದಾಗಿ ಮರು ನಿರ್ಮಾಣ ಮಾಡುವ ಅನೇಕ ಸಾಧ್ಯತೆಗಳನ್ನು ತೆರೆದಿಟ್ಟಿದೆ ಎಂದು ವಿಶ್ವಾಸದಿಂದ ಹೇಳಬಯಸುತ್ತೇನೆ. ಇಷ್ಟು ದಿನ ಕರ್ನಾಟಕ ಪ್ರದೇಶ ಯುವ ಜನತಾದಳ (ಜಾತ್ಯತೀತ) ಘಟಕದ ಅಧ್ಯಕ್ಷನಾಗಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ತಮ್ಮ ಮಾರ್ಗದರ್ಶನದಿಂದ ನನ್ನ ಕೈಲಾದ ಮಟ್ಟಿಗೆ ಕರ್ತವ್ಯ ನಿರ್ವಹಿಸಿದ್ದೇನೆ. ಪಕ್ಷ ಸಂಘಟನೆ ಮಾಡಲು ಶ್ರಮಿಸಿದ್ದೇನೆ" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ : ನನ್ನನ್ನು ಸೋಲಿಸಲು ಕಾಂಗ್ರೆಸ್‌ನವರು 3 ಸಾವಿರ ರೂ. ಕೂಪನ್ ಕಾರ್ಡ್ ಕೊಟ್ಟರು: ನಿಖಿಲ್ ಕುಮಾರಸ್ವಾಮಿ ಆರೋಪ
"ಸೋಲೇ ಅಂತಿಮವಲ್ಲ, ಈ ಚುನಾವಣೆಯ ಸೋಲು ಮೆಟ್ಟಿ ಪಕ್ಷವನ್ನು ಬಲವಾಗಿ ಕಟ್ಟುವ ದಿಸೆಯಲ್ಲಿ ನಾವೆಲ್ಲರೂ ಅರ್ಪಣಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಬೇಕಿದೆ. ಹೊಸ ನಾಯಕತ್ವಕ್ಕೆ ಅವಕಾಶ ಮಾಡಿಕೊಡಬೇಕಿದೆ. ಈ ನಿಟ್ಟಿನಲ್ಲಿ ನಾನು ಕರ್ನಾಟಕ ಪ್ರದೇಶ ಯುವ ಜನತಾದಳ (ಕರ್ನಾಟಕ) ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಅದನ್ನು ತಾವು ಅಂಗೀಕಾರ ಮಾಡಬೇಕು ಎಂದು ಕೇಳಿಕೊಳ್ಳುತ್ತೇನೆ" ಎಂದು ಸಿಎಂ ಇಬ್ರಾಹಿಂ ಅವರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಜೆಡಿಎಸ್ ಸೋಲಿನ ನೈತಿಕ ಹೊಣೆ ಹೊತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿ ಎಂ ಇಬ್ರಾಹಿಂ ರಾಜೀನಾಮೆ
ಈ ನಿರ್ಧಾರವನ್ನು ನೀವು ಒಪ್ಪಿ ನವ ನಾಯಕತ್ವಕ್ಕೆ ಅನುವು ಮಾಡಿಕೊಟ್ಟು ಪಕ್ಷವನ್ನು ಗಟ್ಟಿಗೊಳಿಸುವ ದಿಕ್ಕಿನಲ್ಲಿ ಒಟ್ಟಾಗಿ ಸಾಗಬೇಕಿದೆ ಎನ್ನುವುದು ನನ್ನ ವಿನಮ್ರ ಸಲಹೆ ಮತ್ತು ಮನವಿ. ತಮ್ಮ ಹಾಗೂ ವರಿಷ್ಠರ ಆಶಯ, ಪಕ್ಷದ ಹಿತದೃಷ್ಟಿಯಿಂದ ಸಂಘಟನೆ ಕೆಲಸಕ್ಕೆ ನಾನು ಸದಾ ಸಿದ್ಧ. ಯುವ ಸಮುದಾಯದ ಜನ ಸೇರಿ ಪಕ್ಷ ಕಟ್ಟುವುದಕ್ಕೆ ನಾನೆಂದೂ ಹಿಂಜರಿಯುವುದಿಲ್ಲ. ನನ್ನ ಭಾವನೆಗಳನ್ನು ತಾವು ಗೌರವಿಸುವಿರಿ ಎನ್ನುವ ವಿಶ್ವಾಸದೊಂದಿಗೆ ಇಷ್ಟು ದಿನ ನನ್ನೊಂದಿಗೆ ಶ್ರಮಿಸಿ ಪಕ್ಷಕ್ಕಾಗಿ ಹೆಗಲು ಕೊಟ್ಟ ಎಲ್ಲ ಹಿರಿ, ಕಿರಿಯರಿಗೆ ನನ್ನ ಗೌರವಪೂರ್ವಕ ನಮನಗಳು ಎಂದು ಇಷ್ಟು ದಿನ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.
ಇದನ್ನೂ ಓದಿ : ಸಂಖ್ಯಾಬಲ ಇಲ್ಲ ಎಂದು ಎದೆಗುಂದಬೇಡಿ: ನೂತನ ಶಾಸಕರಿಗೆ ಧೈರ್ಯ ತುಂಬಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ