ಬೆಂಗಳೂರು: ಭಯೋತ್ಪಾದಕ ಕೃತ್ಯಗಳಿಗೆ ಹಣ ಸಂಗ್ರಹಣೆಗಾಗಿ ಬೆಂಗಳೂರು ಹೊರವಲಯದಲ್ಲಿ ಡಕಾಯಿತಿ ಮಾಡುತ್ತಿದ್ದ ಆರೋಪದಡಿ ಬಂಧನವಾಗಿದ್ದ ಜಮಾತ್ ಉಲ್ ಮುಜಾಹಿದೀನ್ ಬಾಂಗ್ಲಾದೇಶ್ (JMB) ಸಂಘಟನೆಯ ಮೂವರು ಆರೋಪಿಗಳಿಗೆ ಎನ್ಐಎ ವಿಶೇಷ ನ್ಯಾಯಾಲಯ ತಲಾ 7 ವರ್ಷ ಸಜೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.
ಬಂಧಿತ ನಜೀರ್ ಶೇಖ್ಗೆ 7 ವರ್ಷ ಸಜೆ ಹಾಗೂ 48 ಸಾವಿರ ರೂ. ಹಬೀಬುರ್ ರೆಹಮಾನ್ಗೆ - 7 ವರ್ಷ ಸಜೆ ಹಾಗೂ 49 ಸಾವಿರ ರೂ ಹಾಗೂ ಮೊಸ್ರಫ್ ಹೊಸೈನ್ಗೆ 7 ವರ್ಷ ಸಜೆ ಹಾಗೂ 41 ಸಾವಿರ ರೂ ದಂಡ ವಿಧಿಸಿ ಆದೇಶಿಸಲಾಗಿದೆ.
ಜೆಎಂಬಿ ಸಂಘಟನೆಯ ಸದಸ್ಯರಾಗಿದ್ದ ಆರೋಪಿಗಳ ಪೈಕಿ ಹಬೀಬುರ್ ರೆಹಮಾನ್ 2014ರ ಬುರ್ದ್ವಾನ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಎನ್ಐಎದ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿದ್ದ.
12 ಜನರ ತಂಡವಾಗಿ ಬೆಂಗಳೂರಿಗೆ ಬಂದಿದ್ದ ಆರೋಪಿಗಳು ಭಯೋತ್ಪಾದಕ ಕೃತ್ಯಗಳಿಗೆ ಹಣ ಹೊಂದಿಸುವ ಉದ್ದೇಶದಿಂದ 2018ರಲ್ಲಿ ಬೆಂಗಳೂರು ಹೊರವಲಯದ ಅತ್ತಿಬೆಲೆಯ ಎರಡು, ಕೆ. ಆರ್ ಪುರಂ ಹಾಗೂ ಕೊತ್ತನೂರಿನ ಒಂದೊಂದು ಮನೆಗಳಲ್ಲಿ ಡಕಾಯಿತಿ ಮಾಡಿದ್ದರು. ಡಕಾಯಿತಿ ಹಣದಲ್ಲಿ ಸ್ಫೋಟಕ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳನ್ನು ಖರೀದಿಸುತ್ತಿದ್ದರು. 2019ರಲ್ಲಿ ಚಿಕ್ಕಬಾಣಾವರ ಬಳಿ ಮನೆಯೊಂದರಲ್ಲಿ ಹಬೀಬುರ್ನನ್ನು ಬಂಧಿಸಲಾಗಿತ್ತು.
ಓದಿ: ರಾತ್ರಿ ವೇಳೆ ಸಾರ್ವಜನಿಕರನ್ನು ಬೆದರಿಸಿ ದರೋಡೆ: ಓರ್ವ ಅಪ್ರಾಪ್ತ ಸೇರಿ ಐವರ ಬಂಧನ