ಬೆಂಗಳೂರು : ಅಲ್‌ಖೈದಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹಾಗೂ ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ ಗಂಭೀರದ ಆರೋಪದ ಮೇಲೆ ಅಸ್ಸಾಂ ಮೂಲದ ಇಬ್ಬರು ಶಂಕಿತ ಉಗ್ರರ ವಿರುದ್ಧದ ದಾಖಲಾಗಿದ್ದ ಪ್ರಕರಣಗಳ ತನಿಖೆ ಪೂರ್ಣಗೊಳಿಸಿರುವ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಗುರುವಾರ ಎನ್‌ಐಎ ವಿಶೇಷ ನ್ಯಾಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು. ಅಸ್ಸಾಂ ಮೂಲದ ಅಖ್ತರ್ ಹುಸೇನ್ ಮತ್ತು ಅಬ್ದುಲ್ ಅಲೀಂ ಮುಂಡಾಲ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ತಿಲಕ್ ನಗರದಲ್ಲಿ ಫುಡ್ ಡೆಲಿವರಿ ಬಾಯ್‌ಗಳಾಗಿದ್ದ ಶಂಕಿತರು ಅಲ್‌ಖೈದಾ ಸಂಘಟನೆ ಕಾರ್ಯಕರ್ತರ ಜತೆ ಸಂಪರ್ಕ ಹೊಂದಿದ್ದರು. ನಂತರ ಸಂಘಟನೆ ಸೇರಲು ಕಾಶ್ಮೀರದ ಮೂಲಕ ಅಫ್ಘಾನಿಸ್ತಾನಕ್ಕೆ ತೆರಳಲು ಸಿದ್ದತೆ ನಡೆಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಅದಕ್ಕೂ ಮೊದಲು, ನಗರದಲ್ಲಿ ಕೆಲವು ಮುಸ್ಲಿಂ ಯುವಕರನ್ನು ಸಂಘಟನೆಗೆ ಸೆಳೆಯಲು ಅಲ್‌ಖೈದಾ ಸಂಘಟನೆಯ ಕಾರ್ಯಕರ್ತರು ಟೆಲಿಗ್ರಾಂ ಹಾಗೂ ಇತರೆ ಸಾಮಾಜಿಕ ಜಾಲತಾಣದ ಮೂಲದ ಕಳುಹಿಸಿದ ಪ್ರಚೋದನಾತ್ಮಕ ವಿಡಿಯೋಗಳನ್ನು ತೋರಿಸುತ್ತಿದ್ದರು. ಶಂಕಿತರ ಪೈಕಿ ಅಖ್ತರ್ ಹುಸೇನ್, ಎಂಡ್ ಟು ಎಂಡ್ ಎನ್‌ಕ್ರಿಫ್ಶನ್ ಮೂಲಕ ಅಲ್‌ಖೈದಾ ಸಂಘಟನೆ ಸದಸ್ಯರೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ದೊರೆತಿದೆ.
ಬೆಂಗಳೂರು ಮಾತ್ರವಲ್ಲದೇ, ಪಕ್ಕದ ರಾಜ್ಯ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಯುವಕರನ್ನು ಸಂಘಟನೆಗೆ ಸೆಳೆಯಲು ಕೆಲಸ ಮಾಡುತ್ತಿದ್ದನಂತೆ. ಇದಕ್ಕೆ ಚೆನ್ನೈನಲ್ಲಿದ್ದ ಅಬ್ದುಲ್ ಅಲೀಂ ಮುಂಡಾಲ್ ಎಂಬಾತನನ್ನು ಬಳಸಿಕೊಂಡಿದ್ದ. ಆತನಿಗೆ ಕಾಶ್ಮೀರದ ಮೂಲಕ ಅಫ್ಘಾನಿಸ್ತಾನಕ್ಕೆ ಹೋಗಿ ಸಮುದಾಯದ ಪರ ಹೋರಾಟ ನಡೆಸಲು ಪ್ರಚೋದಿಸುತ್ತಿದ್ದ ಎಂಬ ಸತ್ಯಾಂಶ ತನಿಖೆಯಿಂದ ಹೊರಬಿದ್ದಿದೆ.
ಈ ಮಾಹಿತಿ ಸಂಗ್ರಹಿಸಿದ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಬೆಂಗಳೂರಿನ ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ನಂತರ ತಿಲಕನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ಶಂಕಿತ ಉಗ್ರ ಅಖ್ತರ್ ಮನೆ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿ ಜಿಹಾದಿ ಪತ್ರಗಳು, ಎಲೆಕ್ಟ್ರಾನಿಕ್ ಡಿವೈಸ್‌ಗಳು ದೊರೆತಿದ್ದವು. ನಂತರ ಅಖ್ತರ್‌ನನ್ನು ಬೆಂಗಳೂರಿನಲ್ಲಿ ಹಾಗೂ ಮುಂಡಾಲ್‌ನನ್ನು ಚೆನ್ನೈನಲ್ಲಿ ಬಂಧಿಸಲಾಗಿತ್ತು.
ಬಳಿಕ ಪ್ರಕರಣ ದಾಖಲಿಸಿಕೊಂಡ ಎನ್‌ಐಎ ಅಧಿಕಾರಿಗಳು ಅಖ್ತರ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅಸ್ಸಾಂನಲ್ಲಿ ನಡೆದ ಎನ್‌ಆರ್‌ಸಿ ಮತ್ತು ಸಿಎಎ ವಿರುದ್ಧ ಹೋರಾಟದಲ್ಲಿ ಈತ ಭಾಗಿಯಾಗಿದ್ದುದು, ದೇಶದ ವ್ಯವಸ್ಥೆ ಬಗ್ಗೆ ಆಕ್ರೋಶಗೊಂಡು ಉಗ್ರ ಸಂಘಟನೆಗಳ ವಿಡಿಯೋ ಹಾಗೂ ವೆಬ್‌ಸೈಟ್‌ಗಳನ್ನು ಪರಿಶೀಲಿಸಿದ ವಿಚಾರ, ಅಲ್ಲದೇ ಕೆಲ ಪ್ರಚೋದನಾತ್ಮಕ ಹೇಳಿಕೆ ಹಾಗೂ ಮಾತುಗಳನ್ನಾಡುತ್ತಿದ್ದ ಸಂಗತಿ ಹಾಗು ಈ ವಿಚಾರ ತಿಳಿದ ಸಂಘಟನೆ ಸದಸ್ಯರು ಅಖ್ತರ್‌ನನ್ನು ಸಂಪರ್ಕಿಸಿದ್ದು, ಆರ್ಥಿಕ ನೆರವು ನೀಡಿ ಬೆಂಗಳೂರಿಗೆ ಕಳುಹಿಸಿರುವ ವಿಚಾರಗಳೆಲ್ಲ ಬೆಳಕಿಗೆ ಬಂದಿದೆ. ಈತ ನಗರದಲ್ಲಿ ಜಿಹಾದಿ ಕೃತ್ಯದಲ್ಲಿ ತೊಡಗಿದ್ದ ಎಂಬುದು ಎನ್‌ಐಎ ತನಿಖೆಯಲ್ಲಿ ಗೊತ್ತಾಗಿದೆ.
ಇದನ್ನೂ ಓದಿ: ಶಿವಮೊಗ್ಗ ಸ್ಫೋಟ ಪ್ರಕರಣ: ಉಳ್ಳಾಲ ಇಂಜಿನಿಯರಿಂಗ್ ಕಾಲೇಜ್ ಮೇಲೆ ಎನ್ಐಎ ದಾಳಿ, ವಿದ್ಯಾರ್ಥಿ ವಶ