ಬೆಂಗಳೂರು : ನಗರದ ಮಾದನಾಯಕನಹಳ್ಳಿ ನಕಲಿ ನೋಟು ಚಲಾವಣೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಎನ್ಐಎ ಬಂಧಿಸಿದೆ. ಪರಾರಿಯಾಗಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿ ಎಸ್ ಕೆ ಜಹಿರುದ್ದೀನ್ ಅಲಿಯಾಸ್ ಜಹೀರ್ನನ್ನು ಇಂದು ಕಸ್ಟಡಿ ಕೋರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮೂಲತಃ ನಗರದ ಮದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ 2018ರಲ್ಲಿ ಪ್ರಕರಣ ದಾಖಲಾಗಿತ್ತು. ₹2000 ಮುಖಬೆಲೆಯ 6.84 ಲಕ್ಷವನ್ನು ಒಟ್ಟು ನಾಲ್ಕು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣವನ್ನು 2018ರಲ್ಲಿ ರಾಜ್ಯ ಪೊಲೀಸರು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಿದ್ದರು. ಒಟ್ಟು ಮೂರು ಚಾರ್ಜ್‌ಶೀಟ್‌ಗಳನ್ನು ಎನ್‌ಐಎ, ಆರು ಆರೋಪಿಗಳ ವಿರುದ್ಧ ಈ ಹಿಂದೆ ಸಲ್ಲಿಸಿತ್ತು.
ಪರಾರಿಯಾಗಿದ್ದ ಆರೋಪಿ ಜಹೀರುದ್ದೀನ್ ಈಗಾಗಲೇ ಬಂಧಿತ ಆರೋಪಿಗಳಾಗಿರುವ ಅಬ್ದುಲ್ ಖಾದಿರ್ ಮತ್ತು ಸಬಿರುದ್ದೀನ್ ನಿಕಟವರ್ತಿಯಾಗಿದ್ದ. ಬಾಂಗ್ಲಾದೇಶದದಿಂದ ನಕಲಿ ನೋಟು ತರಿಸಿಕೊಂಡು ದೇಶದ ವಿವಿಧ ಭಾಗಗಳಲ್ಲಿ ಹಂಚಲು ಸಹವರ್ತಿಗಳಿಗೆ ಕಳುಹಿಸುತ್ತಿದ್ದರು.
ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಜಹೀರುದ್ದೀನ್ನನ್ನು ಹಾಜರುಪಡಿಸಿ ಬಾಡಿ ವಾರೆಂಟ್ ಕೋರಲಾಗಿದೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.