ಬೆಂಗಳೂರು: ಬಿಜೆಪಿ ಯುವ ಮುಖಂಡ ಹಾಗೂ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಐವರು ಆರೋಪಿಗಳ ಸುಳಿವು ನೀಡಿದವರಿಗೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಬಹುಮಾನ ಘೋಷಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಶಾಂತಿ ಹಾಗೂ ಭಯ ಹುಟ್ಟಿಸುವ ಉದ್ದೇಶದಿಂದ ಕೃತ್ಯದಲ್ಲಿ ಭಾಗಿಯಾಗಿದ್ದ ಪ್ರಕರಣದ 15ನೇ ಆರೋಪಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಮೊಹಮ್ಮದ್ ಮುಸ್ತಫಾ, 16ನೇ ಆರೋಪಿಯಾಗಿರುವ ನಕ್ಕಿಲ್ಯಾಡಿ ಮೂಲದ ಮಸೂದ್ ಅಂಗಡಿ, 17ನೇ ಆರೋಪಿಯಾಗಿರುವ ಬಂಟ್ವಾಳ ಮೂಲದ ಮೊಹಮ್ಮದ್ ಶರೀಫ್, 18ನೇ ಆರೋಪಿ ಉಮರ್ ಆರ್., ಹಾಗೂ 19ನೇ ಆರೋಪಿಯಾಗಿರುವ ಬೆಳ್ಳಾರೆ ಮೂಲದ ಅಬೂಬಕ್ಕರ್ ಸಿದ್ದಿಕಿಯ ಕುರಿತು ಮಾಹಿತಿ ನೀಡಿದರೆ ಸೂಕ್ತ ಬಹುಮಾನ ನೀಡುವುದಾಗಿ ಘೋಷಿಸಿದೆ.
ಕಳೆದ ವರ್ಷ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಮೇಲೆ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಪ್ರವೀಣ್ ಬೈಕ್‌ನಲ್ಲಿ ಮನೆಗೆ ಹೊರಡಲು ಸಿದ್ಧರಾಗಿದ್ದಾಗ ಬೈಕ್‌ನಲ್ಲಿ ಆಗಮಿಸಿದ್ದ ಮುಸುಕುಧಾರಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಪ್ರವೀಣ್ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಮಾರ್ಗಮಧ್ಯೆ ಮೃತಪಟ್ಟಿದ್ದರು.
ಪ್ರವೀಣ್ ಹತ್ಯೆ ಖಂಡಿಸಿ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಮಾಜಿ ಶಾಸಕ ಸಂಜೀವ ಮಠಂದೂರು, ಮಾಜಿ ಸಚಿವ ಎಸ್.ಅಂಗಾರ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಹತ್ಯೆಗೆ ಸಂಬಂಧಿಸಿ ಆರೋಪಿಗಳ ಪತ್ತೆಗಾಗಿ ಪೊಲೀಸ್ ಇಲಾಖೆಯು ವಿಶೇಷ ತಂಡಗಳನ್ನು ರಚಿಸಿತ್ತು. ನಂತರ ನಡೆದ ಬೆಳವಣಿಗೆಗಳಲ್ಲಿ ಕೊಲೆಗೆ ಸಹಕಾರ ನೀಡಿದ ಹಲವು ಆರೋಪಿಗಳನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಆರೋಪಿಗಳ ಸುಳಿವು ನೀಡಿದವರಿಗೆ ತಲಾ ₹2 ಲಕ್ಷ ಬಹುಮಾನ