ಬೆಂಗಳೂರು: ಜಿಕೆವಿಕೆ ಕೃಷಿ ವಿವಿ ಬೆಂಗಳೂರು ಈ ಬಾರಿ ಬಿಡುಗಡೆ ಮಾಡಿರುವ ಹದಿನೇಳು ತಂತ್ರಜ್ಞಾನಗಳ ಪೈಕಿ ಸೋಲಾರ್ ಚಾಲಿತ ರೇಷ್ಮೆ ಕೋಶ ಒಣಗಿಸುವ ಸೌರ ಸುರಂಗ ಯಂತ್ರವೂ ಒಂದಾಗಿದೆ.
ಇಂಜಿನಿಯರಿಂಗ್ ವಿಭಾಗದಿಂದ ಸೋಲಾರ್ ಚಾಲಿತ ರೇಷ್ಮೆ ಕೋಶ ಒಣಗಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ರೇಷ್ಮೆ ಕೋಶ ಅಷ್ಟೇ ಅಲ್ಲ ಹಣ್ಣುಗಳನ್ನೂ ಒಣಗಿಸಬಹುದು. 60 ಕೆಜಿ ಸಾಮರ್ಥ್ಯದ ಸೌರ ಸುರಂಗ ಶುಷ್ಕಕಾರಿ ಯಂತ್ರದ ಬೆಲೆ 65 ಸಾವಿರ ರೂಪಾಯಿಯಾಗಿದೆ. ಪ್ರಸ್ತುತ ಕೋಲಾರ, ಚಿಂತಾಮಣಿ, ರಾಮನಗರದ ರೇಷ್ಮೆ ಬೆಳೆಗಾರರು ಗೂಡನ್ನು ತೆಗೆದುಕೊಂಡು ಹೋದ ಮೇಲೆ ರೇಷ್ಮೆ ಕೋಶವನ್ನು ಹೊರಗಡೆ ಎಸೆಯುತ್ತಾರೆ. ಇದು ದುರ್ವಾಸನೆಯೂ ಬೀರುತ್ತದೆ.
ಇದನ್ನು ತಡೆಯಲು ಅರವತ್ತು ಕೆಜಿ ಸಾಮರ್ಥ್ಯದ ಸೋಲಾರ್ ಡ್ರೈಯರ್ ಅಭಿವೃದ್ಧಿಪಡಿಸಿದ್ದು, ಇದರಲ್ಲಿ ರೇಷ್ಮೆ ಕೋಶವನ್ನು ಸೋಲಾರ್ ಸಹಾಯದಿಂದ ಒಣಗಿಸಬಹುದು. ಬಿಸಿಲು ಚೆನ್ನಾಗಿದ್ದರೆ ಒಂದು ದಿನಕ್ಕೆ ಒಣಗಿಸಬಹುದು. ಆದರೆ ಸೋಲಾರ್ ಡ್ರೈಯರ್ ಬಳಸದೆ ಇದ್ದರೆ 18ರಿಂದ 22 ಗಂಟೆ ಬೇಕಾಗುತ್ತದೆ. ಸೋಲಾರ್ ಡ್ರೈಯರ್ ಮೂಲಕ 9 ಗಂಟೆಯಲ್ಲಿ ಒಣಗಿಸಬಹುದು. ಇದನ್ನು ಎಣ್ಣೆ ಉತ್ಪಾದಿಸಲು ಬಳಸಬಹುದು. ಪ್ರಾಣಿಗಳಿಗೆ ಆಹಾರವಾಗಿ ನೀಡಬಹುದು ಎಂದು ಕೃಷಿ ಇಂಜಿನಿಯರಿಂಗ್ ಕಾಲೇಜ್ನ ಆಹಾರ ಸಂಸ್ಕರಣಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ದ್ರೋಣಾಚಾರಿ ಮಾನ್ವಿ ತಿಳಿಸಿದರು.