ಬೆಂಗಳೂರು: ಸಿಬ್ಬಂದಿ ಹಾಗೂ ಪಶು ಔಷಧಿಗಳ ಮಾಹಿತಿ ಇರುವ ಎರಡು ಪ್ರತ್ಯೇಕ ಹೊಸ ಸಾಫ್ಟ್‌ವೇರ್ ಅಳವಡಿಕೆ ಮಾಡಲಾಗುತ್ತಿದ್ದು, ಇಲಾಖೆಗೆ ಸಂಬಂಧಿಸಿದ ಹೊಸ ವೆಬ್ಸೈಟ್ಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಮೀನುಗಾರಿಕೆ ಹಾಗೂ ಪಶುಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವೆಬ್ಸೈಟ್ನಲ್ಲಿ ಇಲಾಖೆಯ ಯೋಜನೆಗಳ ಸಂಪೂರ್ಣ ಮಾಹಿತಿ ಇರಲಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದೆಹಲಿಯಿಂದ ಬಂದ ನಂತರ ಈ ಕಾರ್ಯಕ್ರಮಕ್ಕೆ ಚಾಲನೆ ಕೊಡಲಿದ್ದಾರೆ ಎಂದರು. ಪಶು ವೈದ್ಯರು ತಮಗೆ ಬೇಕಾದ ಔಷಧಿಯನ್ನು ಆನ್ಲೈನ್ನಲ್ಲಿ ಆರ್ಡರ್ ಮಾಡಬಹುದು ಎಂದು ಹೇಳಿದರು.
ಹಸುಗಳಿಗೆ ಚಿಪ್ ಅಳವಡಿಕೆ :
ರೈತರು ಹಸುಗಳನ್ನ ಖರೀದಿಸಲು ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ನೀಡಲಾಗಿದೆ. ಇದರಲ್ಲಿ ಬ್ಯಾಂಕ್ ಹಾಗೂ ರೈತರು ಗೋಲ್ಮಾಲ್ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಅದನ್ನು ತಪ್ಪಿಸಲು ಹಸುಗಳಿಗೆ ಚಿಪ್ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಇದರಿಂದ ಆನ್ಲೈನ್ ಮೂಲಕ ಹಸುಗಳು ಎಲ್ಲಿವೆ ಎಂದು ನಿಗಾ ಇಡಬಹುದು. ಜೊತೆಗೆ ಫಲಾನುಭವಿಗಳು ಹಸು ಖರೀದಿ, ಮಾರಾಟ ಮಾಡುವುದನ್ನು ತಪ್ಪಿಸಬಹುದು ಎಂದರು. ಈಗಾಗಲೇ 635 ಹಸುಗಳಿಗೆ ಚಿಪ್ ಅಳವಡಿಸೋ ಕಾರ್ಯ ಪೂರ್ಣಗೊಂಡಿದೆ. ರೈತರಿಗೆ ಸಾಲ ಸೌಲಭ್ಯದ ಮೂಲಕ ನೀಡಿರುವ ಹಸುಗಳಿಗೂ ಚಿಪ್ ಅಳವಡಿಸುವ ಕುರಿತು ಚಿಂತನೆ ನಡೆದಿದೆ ಎಂದು ಹೇಳಿದರು.
ಒಮ್ಮೆ ಹಸುವನ್ನು ಸಬ್ಸಿಡಿ ದರದಲ್ಲಿ ಖರೀದಿಸಿದ ಮೇಲೆ 6 ವರ್ಷದವರೆಗೆ ಮಾರಾಟ ಮಾಡುವಂತಿಲ್ಲ. ಒಬ್ಬರಿಗೆ 1.20 ಲಕ್ಷ ರೂ.ನಲ್ಲಿ ಎರಡು ಹಸುಗಳನ್ನು ನೀಡಲಾಗುತ್ತಿದೆ. ಬೇಡಿಕೆ ಹೆಚ್ಚು ಬರುತ್ತಿರುವುದರಿಂದ ಒಂದು ಹಸು ಕೊಡುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದರು. ಇನ್ನು ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನೀಡಲು ಈಗಾಗಲೇ 1 ರುಪಾಯಿ ಇನ್ಸೆಂಟೀವ್ ಹೆಚ್ಚಳ ಮಾಡಿದ್ದೇವೆ. ಅಗತ್ಯಕ್ಕೆ ತಕ್ಕಂತೆ ಆಯಾ ಒಕ್ಕೂಟಗಳು ಹಾಲಿನ ಇನ್ಸೆಂಟೀವ್ ದರ ಹೆಚ್ಚಳ ಮಾಡುತ್ತವೆ ಎಂದರು.
ಸುವರ್ಣ ತ್ರಿಭುಜ ಬೋಟ್ನಲ್ಲಿ ನಾಪತ್ತೆಯಾದ ಮೀನುಗಾರರ ಕುಟುಂಬಕ್ಕೆ ತಲಾ 11 ಲಕ್ಷ:
ಸುವರ್ಣ ತ್ರಿಭುಜ ಬೋಟ್ ನಾಪತ್ತೆ ನಂತರ ಇಂತಹ ಘಟನೆ ನಡೆಯದಂತೆ ತಡೆಯಲು ಹೊಸ ಟೆಕ್ನಾಲಜಿ ತರುತ್ತಿದ್ದೇವೆ. ಇಸ್ರೋ ಅಭಿವೃದ್ಧಿ ಪಡಿಸಿರುವ ಟೆಕ್ನಾಲಜಿಗಿಂತಲೂ ಅತ್ಯುತ್ತಮ ಟೆಕ್ನಾಲಜಿ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಮುಖ್ಯ ಕಾರ್ಯದರ್ಶಿಗಳು ಇದರ ಪರಿಶೀಲನೆ ಮಾಡುತ್ತಿದ್ದಾರೆ. ಆದಷ್ಟು ಬೇಗ ಅಂತಿಮ ತೀರ್ಮಾನಕ್ಕೆ ಬರುತ್ತೇವೆ ಎಂದರು. ಅಲ್ಲದೆ ಸುವರ್ಣ ತ್ರಿಭುಜ ಬೋಟ್ನಲ್ಲಿ ನಾಪತ್ತೆಯಾಗಿರುವ ಮೀನುಗಾರರ ಕುಟುಂಬಕ್ಕೆ ತಲಾ 11 ಲಕ್ಷ ರೂ. ಪರಿಹಾರ ನೀಡಿದ್ದೇವೆ. ಅವರು ಮರಣ ಹೊಂದಿದ್ದಾರೆ ಎಂದು ಘೋಷಿಸಲು ಸಾಧ್ಯವಿಲ್ಲ. ಹತ್ತು ವರ್ಷಗಳಲ್ಲಿ ಅವರೇನಾದ್ರೂ ವಾಪಸ್ಸು ಬಂದ್ರೆ ಪರಿಹಾರ ಹಣ ವಾಪಸ್ಸು ಮಾಡಬೇಕು ಎಂಬ ಷರತ್ತು ಇದೆ. ಸುವರ್ಣ ತ್ರಿಭುಜ ಬೋಟ್ಗಳ ಬಿಡಿ ಭಾಗ ಮಾತ್ರ ಸಿಕ್ಕಿದೆ. ಮೀನುಗಾರರ ಶವಗಳು ಸಿಕ್ಕಿಲ್ಲ. ಘಟನೆ ಕುರಿತು ಮುಖ್ಯ ಕಾರ್ಯದರ್ಶಿಯವರು ಕೇಂದ್ರಕ್ಕೆ ಪತ್ರ ಬರೆದು ತನಿಖೆಗೆ ಮನವಿ ಮಾಡಿದ್ದಾರೆ. ಏನು ವರದಿ ಬರುತ್ತದೆ ಅಂತಾ ನೋಡೋಣ ಎಂದರು. ಇನ್ನು ತುಂಗಭದ್ರಾ ಡ್ಯಾಂನಲ್ಲಿ ಹೂಳು ಎತ್ತುವ ಕುರಿತು ಇಂದು ಸಭೆ ಕರೆದಿದ್ದೇನೆ. ಆ ಭಾಗದ ಶಾಸಕರೊಂದಿಗೆ ಚರ್ಚಿಸಿ ಸಭೆಯ ನಿರ್ಣಯವನ್ನು ನೀರಾವರಿ ಸಚಿವರಿಗೆ ತಿಳಿಸುತ್ತೇವೆ ಎಂದು ಹೇಳಿದರು.