ಬೆಂಗಳೂರು : ಕೊರೊನಾ ಸೋಂಕಿನಿಂದ ದೂರವಿರಲು ನಗರದ ಸ್ಟಾರ್ಟ್ ಅಪ್ ಸಂಸ್ಥೆ ಬಯೋಫಿ ಕೆಲವೇ ಸೆಕೆಂಡ್ಗಳಲ್ಲಿ ನಿತ್ಯ ಬಳಕೆ ವಸ್ತುಗಳನ್ನು ಸ್ಯಾನಿಟೈಸ್ ಹಾಗೂ ಸ್ಟರಲೈಸ್ ಮಾಡಬಲ್ಲ ಯಂತ್ರವನ್ನು ಆವಿಷ್ಕರಿಸಿದೆ.
ತರಕಾರಿ, ಮೊಬೈಲ್, ದಿನಸಿ ಸಾಮಾಗ್ರಿ ಸೇರಿದಂತೆ ದಿನ ಬಳಕೆ ವಸ್ತುಗಳನ್ನು 15 ರಿಂದ 1 ನಿಮಿಷಗಳಲ್ಲಿ ಸ್ಯಾನಿಟೈಸ್ ಮಾಡಿ, ಕೊರೊನಾ ಸೇರಿದಂತೆ 72 ರೀತಿಯ ವೈರಸ್ಗಳನ್ನು ನಾಶ ಮಾಡುವ ಸಾಮರ್ಥ್ಯ ಈ ಯಂತ್ರಕ್ಕಿದೆ. ಈ ಸ್ಯಾನಿಟೈಸಿಂಗ್ ಯಂತ್ರ ಅಲ್ಟ್ರಾ ವೈಲೆಟ್ ಕಿರಣದಿಂದ ಶೇ. 99.99% ವೈರಾಣುಗಳನ್ನು ಕ್ಷಣಮಾತ್ರದಲ್ಲಿ ನಾಶ ಮಾಡುತ್ತದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರವಿ ಕುಮಾರ್ ಈಟಿವಿ ಭಾರತಕ್ಕೆ ತಿಳಿಸಿದರು.
ಮೂರು ಗಾತ್ರಗಳಲ್ಲಿ ಲಭ್ಯವಿರುವ ಈ ಬಾಕ್ಸ್, 13 ಸಾವಿರ ರೂ.ಗೆ ಈಗ ಲಭ್ಯವಿದೆ. ವಿವಿಧ ಇ-ಕಾಮರ್ಸ್ ಸಂಸ್ಥೆಗಳು 50 ಸಾವಿರ ರೂ.ಯ ಬಾಕ್ಸ್ಗೆ ಬೇಡಿಕೆ ಇಟ್ಟಿದ್ದು, ಬೆಲೆಯಲ್ಲಿ 2 ರಿಂದ 3 ಸಾವಿರ ರೂ. ಕಡಿಮೆಯಾಗಲಿದೆ. ಬಾಕ್ಸ್ನಲ್ಲಿ ಸ್ಯಾನಿಟೈಸ್ ಆಗುವ ಮುಂಚೆ ಬಾಗಿಲು ತೆರೆದರೆ ಯೂವಿ ಕಿರಣ ಅಲ್ಲೇ ಕಟ್ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಸ್ಯಾನಿಟೈಸ್ ಬಾಕ್ಸ್ ಮನೆ, ಸ್ಪಾ, ಸಲೂನ್, ಆಸ್ಪತ್ರೆ ಹಾಗೂ ಕಚೇರಿಗಳಲ್ಲಿ ಉಪಯೋಗಿಸಬಹುದು. ಈ ಬಾಕ್ಸ್ ಅನ್ನು ಉಪಮುಖ್ಯಮಂತ್ರಿ ಹಾಗೂ ಐಟಿ, ಬಿಟಿ ಸಚಿವ ಅಶ್ವತ್ಥ ನಾರಾಯಣ ಲೋಕಾರ್ಪಣೆ ಮಾಡಿದ್ದು, ಕೋವಿಡ್ ವಿರುದ್ಧದ ಯುದ್ಧಕ್ಕೆ ಇಂತಹ ಉಪಕರಣಗಳ ಅಗತ್ಯವಿದೆ ಎಂದು ಹೇಳಿದ್ದಾರೆ.