ಬೆಂಗಳೂರು: ಕೊರೊನಾ ವೈರಸ್ಗೆ ಇಂದು ಮತ್ತೆ 6 ಮಂದಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 170ಕ್ಕೆ ಏರಿದೆ. ಒಂದೇ ದಿನ 442 ಹೊಸ ಪಾಸಿಟಿವ್ ಪ್ರಕರಣಗಳು ದೃಢವಾಗಿದ್ದು, ಸೋಂಕಿತರ ಸಂಖ್ಯೆ 10,560ಕ್ಕೆ ಏರಿದೆ. ಸಕ್ರಿಯ ಸೋಂಕಿತರಿಗಿಂತ ಗುಣಮುಖರಾಗಿ ಡಿಸ್ಜಾರ್ಜ್ ಆದವರ ಸಂಖ್ಯೆ ಹೆಚ್ಚಿದೆ.
ಈವರೆಗೆ 6670 ಮಂದಿ ಗುಣಮುಖರಾಗಿದ್ದು, 3716 ಮಂದಿ ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ದೃಢವಾಗಿರುವ ಕೇಸ್ನಲ್ಲಿ 81 ಅಂತರ್ರಾಜ್ಯ ಪ್ರಯಾಣಿಕರಾದರೆ, 23 ಮಂದಿ ಅಂತರ್ರಾಷ್ಟ್ರೀಯ ಪ್ರಯಾಣ ಹೊಂದಿರುವವರು ಆಗಿದ್ದಾರೆ.
ಏರಿಕೆಯಾಗುತ್ತಲೇ ಇದೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ:
ಮೊದಮೊದಲು ಐಸಿಯುನಲ್ಲಿ ಒಬ್ಬರು ಇಬ್ಬರು ದಾಖಲಾಗುತ್ತಿದ್ದರು, ಆದ್ರೀಗ ಅವರ ಸಂಖ್ಯೆ ಏರುತ್ತಲೇ ಇದೆ. 160 ಮಂದಿ ಐಸಿಯುನಲ್ಲಿ ಇದ್ದು, ಬೆಂಗಳೂರಿನ ಆಸ್ಪತ್ರೆಯೊಂದರಲ್ಲೇ 112 ಮಂದಿ ಇದ್ದಾರೆ. ಕಲಬುರಗಿ, ಧಾರವಾಡ ಸೇರಿದಂತೆ ಒಟ್ಟು 19 ಜಿಲ್ಲೆಗಳಲ್ಲಿ ಸೋಂಕಿತರು ಐಸಿಯುನಲ್ಲಿದ್ದಾರೆ.
ಒಂದೇ ವಾರದಲ್ಲಿ ಏರಿಕೆ:
- ಜೂನ್19- 78 ಮಂದಿ
- ಜೂನ್ 20- 74 ಮಂದಿ
- ಜೂನ್ 21- 77 ಮಂದಿ
- ಜೂನ್ 22- 80 ಮಂದಿ
- ಜೂನ್ 23- 120 ಮಂದಿ
- ಜೂನ್ 24- 112 ಮಂದಿ
- ಜೂನ್ 25- 160 ಮಂದಿ
ಕೊರೊನಾ ವಾರಿಯರ್ಸ್ಗೆ ಸೋಂಕು ಹೆಚ್ಚಾಗಿ ಆಗುತ್ತಿರುವ ಕಾರಣ ರವಿ ಶಂಕರ್ ಆಶ್ರಮದ ಒಂದು ಮಹಡಿಯನ್ನ ರೋಗ ಲಕ್ಷಣವಿಲ್ಲದ ಪೊಲೀಸ್ ಸಿಬ್ಬಂದಿಗಳಿಗೆ ಮತ್ತು ಇಎಸ್ಐ ಆಸ್ಪತ್ರೆಯನ್ನು ತೀವ್ರ ರೋಗ ಲಕ್ಷಣವನ್ನ ಹೊಂದಿರುವ ಪೊಲೀಸ್ ಸಿಬ್ಬಂದಿಗೆ ಚಿಕಿತ್ಸೆ ನೀಡಲು ಮೀಸಲಿಡಲು ಆದೇಶಿಸಲಾಗಿದೆ. ಹೊಸದಾಗಿ ದಾಖಲಾಗುವ ಕೋವಿಡ್ ಸೋಂಕಿತರಿಗೆ ಹೊಸ ನಿಯಮವನ್ನ ಆರೋಗ್ಯ ಇಲಾಖೆ ಜಾರಿ ಮಾಡಿದೆ. ಕೋವಿಡ್ ಪಾಸಿಟಿವ್ ಬಂದವರ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಹೊಂದಿರಬೇಕು. ಪಾಸಿಟಿವ್ ಬಂದವರ ಮನೆ ಅಥವಾ ಕ್ವಾರಂಟೈನ್ ಇರೋ ಜಾಗಕ್ಕೆ ಹೋಗಿ ಆರೋಗ್ಯ ತಪಾಸಣೆ ಮಾಡಬೇಕು. ಅಂದರೆ ಕ್ಯಾನ್ಸರ್, ಸ್ಟೋಕ್, ಹೆಚ್ಐವಿ, ಡಯಾಬಿಟಿಸ್ ಹೀಗೆ ದೀರ್ಘಕಾಲದ ಅನಾರೋಗ್ಯ ಸಮಸ್ಯೆ ಇರುವುದನ್ನು ಖಚಿತ ಪಡಿಸಿಕೊಳ್ಳಬೇಕು. ರೋಗ ಲಕ್ಷಣ ಇರುವವರು ಸಂಬಂಧ ಪಟ್ಟ ಕೋವಿಡ್ ಸರ್ಕಾರಿ- ಖಾಸಗಿ ಆಸ್ಪತ್ರೆಗಳಲ್ಲೇ ದಾಖಲು ಆಗಬೇಕು. ಕೋವಿಡ್ ಕೇರ್ ಸೆಂಟರ್, ಡೆಡಿಕೇಟೆಡ್ಕೋವಿಡ್ ಹೆಲ್ತ್ ಕೇರ್, ಡೆಡಿಕೇಟ್ ಕೋವಿಡ್ ಹಾಸ್ಪಿಟಲ್ ಹೀಗೆ ಮೂರು ಹಂತದಲ್ಲಿ ವಿಂಗಡಿಸಲಾಗಿದೆ.
ಕದಿರೇನಹಳ್ಳಿಯ ಸೌಜನ್ಯ ಮೆಡಿಕಲ್ಸ್ಗೆ ನೋಟಿಸ್:
ಜ್ವರ, ಶೀತ, ಕೆಮ್ಮು ಮುಂತಾದ ಕಾಯಿಲೆಗಳಿಗೆ ಔಷಧ ಕೊಳ್ಳಲು ಬರುವ ರೋಗಿಗಳ ವಿವರಗಳನ್ನು ಸರ್ಕಾರದ ನಿರ್ದಿಷ್ಟ ವೆಬ್ಸೈಟ್ನಲ್ಲಿ ನಮೂದಿಸಲು ಸೂಚಿಸಿತ್ತು. ಆದ್ರೆ ಕದಿರೇನಹಳ್ಳಿ ಸೌಜನ್ಯ ಮೆಡಿಕಲ್ ಈ ನಿಯಮವನ್ನು ಮೀರಿದ ಕಾರಣ ಆರೋಗಯ ಇಲಾಖೆಯಿಂದ ಸೌಜನ್ಯ ಮೆಡಿಕಲ್ಸ್ಗೆ ನೋಟಿಸ್ ನೀಡಲಾಗಿದೆ.
ಒಪಿಡಿ- ಕೌನ್ಸ್ಲಿಂಗ್ ವ್ಯವಸ್ಥೆಗಾಗಿ ನಿಮ್ಹಾನ್ಸ್ ನೂತನ ಘಟಕ:
ಬೆಂಗಳೂರು ಉತ್ತರ ವಿಭಾಗದ ರೋಗಿಗಳಿಗೆ ಅನುಕೂಲವಾಗಲೆಂದು ನಿಮ್ಹಾನ್ಸ್ ನ ನೂತನ ಘಟಕ ಸ್ಥಾಪಿಸಲಾಗುತ್ತಿದೆ. ಒಪಿಡಿ ಮತ್ತು ಕೌನ್ಸಲಿಂಗ್ ವ್ಯವಸ್ಥೆ ಒಪಿಡಿಯಲ್ಲಿ ಇರಲಿದ್ದು, ರೋಗಿಗಳ ಸಂಖ್ಯೆ ಹತೋಟಿಯಲ್ಲಿಡಲು ಸಹಕಾರಿಯಾಗಿರಲಿದೆ. ಇನ್ನು ನಿಮ್ಹಾನ್ಸ್ ಮುಖ್ಯ ಕಟ್ಟಡಕ್ಕೆ ಬರುವ ರೋಗಿಗಳಲ್ಲಿ ಕೆಲವರು ಅಲ್ಲಿಗೆ ತೆರಳಬಹುದಾಗಿದೆ. ನಾಳೆ ಸಿಎಂ ಯಡಿಯೂರಪ್ಪ ಶಂಕುಸ್ಥಾಪನೆ ಮಾಡಲಿದ್ದಾರೆ.