ಬೆಂಗಳೂರು: ಶಾಲಾ-ಕಾಲೇಜು, ಆಸ್ಪತ್ರೆ, ಪ್ರಾರ್ಥನಾ ಮಂದಿರದ ಸಮೀಪ ಮದ್ಯದಂಗಡಿ ಮಾತ್ರವಲ್ಲ, ಮೊಬೈಲ್ ಟವರ್ ಕೂಡ ಇರುವಂತಿಲ್ಲ. ಸದ್ಯ ಇರುವ ಟವರ್ಗಳ ಸ್ಥಳಾಂತರಕ್ಕೆ ನಗರಾಭಿವೃದ್ಧಿ ಇಲಾಖೆ 90 ದಿನದ ಡೆಡ್ ಲೈನ್ ನೀಡಿದೆ. ಇನ್ನು ಈ ಮೊಬೈಲ್ ಟವರುಗಳ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹೊಸ ನೀತಿ ರೂಪಿಸಿ ಜಾರಿಗೆ ತರಲು ಮುಂದಾಗಿದೆ.
ಎಲ್ಲೆಂದರಲ್ಲಿ ತಲೆ ಎತ್ತಿರುವ ಮೊಬೈಲ್ ಟವರ್ಗಳ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ನೂತನ ಮೊಬೈಲ್ ಟವರ್ ನೀತಿಯನ್ನು ರಚಿಸಿದೆ. ಮೂರು ತಿಂಗಳ ಕಾಲಮಿತಿಯಲ್ಲಿ ಸಮಗ್ರವಾಗಿ ನಿಯಮಾವಳಿಯನ್ನು ಅನುಷ್ಠಾನಕ್ಕೆ ತರುತ್ತಿದೆ. ಆಗಸ್ಟ್ ಅಂತ್ಯದೊಳಗೆ ನೂತನ ನೀತಿಯಂತೆ ಟವರ್ಗಳು ಕಾರ್ಯನಿರ್ವಹಿಸಲು ಆದೇಶ ಹೊರಡಿಸಲಾಗಿದೆ.
ನಿಯಮಾವಳಿಯಲ್ಲಿ ಏನಿದೆ?
• ಶಾಲಾ-ಕಾಲೇಜು,ಆಸ್ಪತ್ರೆ ಆವರಣದಿಂದ 50 ಮೀಟರ್ ದೂರದಲ್ಲಿ ಟವರ್ ಇರುವಂತಿಲ್ಲ
• ಪ್ರಾರ್ಥನಾ ಮಂದಿರ, ಧಾರ್ಮಿಕ ಕೇಂದ್ರದಿಂದ 50 ಮೀಟರ್ ಒಳಗಿನ ಟವರ್ ತೆರವು
• ಸಕ್ಷಮ ಪ್ರಾಧಿಕಾರದಲ್ಲಿ ಪ್ರತಿ ಟವರ್ ನೋಂದಣಿ ಕಡ್ಡಾಯ
• ನೋಂದಣಿಯಾಗದ ಟವರ್ ಪರವಾನಗಿ ರದ್ದು
• ಕಟ್ಟಡ ಸಾಮರ್ಥ್ಯದ ಆಧಾರದಲ್ಲಿ ಟವರ್ ನಿರ್ಮಾಣ ಕಡ್ಡಾಯ
• ಕಟ್ಟಡಗಳ ಯೋಜನೆ ಪರಿಷ್ಕರಣೆ ನಂತರವೇ ಟವರ್ ನಿರ್ಮಾಣ
ರಾಜ್ಯ ಸರ್ಕಾರ ರೂಪಿಸಿರುವ ನಿಯಮಾವಳಿಯನ್ನು ಉಲ್ಲಂಘಿಸುವ ಮೊಬೈಲ್ ಟವರ್ಗಳ ಪರವಾನಗಿ ರದ್ದುಪಡಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದ್ದು ಲೋಪದೋಷ ಸರಿಪಡಿಸಿಕೊಳ್ಳಲು 3 ತಿಂಗಳ ಕಾಲಾವಕಾಶ ನೀಡಿದೆ.
ನೂತನ ನಿಯಮಾವಳಿ ಅನ್ವಯ, ಯಾವ ಪ್ರದೇಶದಲ್ಲಿ ಎಷ್ಟು ಟವರ್ಗಳಿವೆ? ಎಷ್ಟು ಪ್ರಮಾಣದ ತರಂಗಾಂತರ ಹೊರಸೂಸುತ್ತಿದೆ? ಫ್ರೀಕ್ವೆನ್ಸಿ ಎಷ್ಟಿದೆ? ಒಂದು ಟವರ್ಗೆ ಪರವಾನಗಿ ಪಡೆದು ಹೆಚ್ಚು ಟವರ್ ನಿರ್ಮಾಣ ಮಾಡಿರುವುದು ಪತ್ತೆ ಹಚ್ಚುವುದು. ಮನೆಗಳ ಮೇಲೆ ಟವರ್ ನಿರ್ಮಾಣಕ್ಕೆ ಅನುಮತಿ ಪಡೆಯಲಾಗಿದೆಯೇ? ಕಟ್ಟಡ ಟವರ್ ಭಾರ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆಯಾ? ಪ್ಲಾನ್ ಮಾಡಿಫಿಕೇಷನ್ ಆಗಿದೆಯಾ? ಎಂಬೆಲ್ಲಾ ವಿಚಾರಗಳ ಬಗ್ಗೆ ನೂತನ ಟವರ್ ನೀತಿಯಲ್ಲಿ ನಿಯಮಾವಳಿ ರೂಪಿಸಲಾಗಿದೆ.
ಟವರ್ ಶುಲ್ಕ ನಿಗದಿ:
• ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಷಿಕ 1 ಲಕ್ಷ ರೂ.
• ಮಹಾನಗರ ಪಾಲಿಕೆ ವಾರ್ಷಿಕ 50 ಸಾವಿರ ರೂ.
• ನಗರ ಸಭೆ ವ್ಯಾಪ್ತಿಯಲ್ಲಿ ವಾರ್ಷಿಕ 35 ಸಾವಿರ ರೂ.
• ಪುರಸಭೆ ವ್ಯಾಪ್ತಿಯಲ್ಲಿ ವಾರ್ಷಿಕ 25 ಸಾವಿರ ರೂ.
• ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ವಾರ್ಷಿಕ 20 ಸಾವಿರ ರೂ.
• ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾರ್ಷಿಕ 10 ಸಾವಿರ ರೂ.
ಈ ಕುರಿತು ಮಾಹಿತಿ ನೀಡಿದ ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್, ನೋಂದಾವಣಿ ಶುರು ಮಾಡಿದರೆ ಆರು ತಿಂಗಳಿನಲ್ಲಿ ಸಮಗ್ರ ಮಾಹಿತಿ ಸಿಗಲಿದೆ. ಯಾವ ಟವರ್ ಎಲ್ಲಿದೆ? ಎಷ್ಟಿದೆ? ಯಾರು ನಡೆಸುತ್ತಿದ್ದಾರೆ? ಯಾವ ಯಾವ ಪ್ರದೇಶದಲ್ಲಿ ಯಾರು ಟವರ್ಗಳ ನಿರ್ವಹಣೆಯನ್ನು ಯಾರು ಮಾಡುತ್ತಾರೆ ಎನ್ನುವ ಮಾಹಿತಿ ಸಿಗಲಿದೆ. ಎಲ್ಲಾ ಟವರುಗಳ ನೋಂದಾಣಿಯಿಂದ ಸರ್ಕಾರದ ಆದಾಯವೂ ಹೆಚ್ಚಾಗಲಿದೆ ಎಂದರು.
ಹೊಸ ಯೋಜನೆ ಪ್ರಕಾರವೇ ಇನ್ನು ಮುಂದೆ ಟವರ್ ನಿರ್ಮಾಣ ಮಾಡಬೇಕು. ಇನ್ನು 3 ತಿಂಗಳಿನಲ್ಲಿ ಯೋಜನೆಯ ಪ್ರಕಾರ ಎಲ್ಲವೂ ಬದಲಾಗಬೇಕು. ಕಡ್ಡಾಯವಾಗಿ ಎಲ್ಲಾ ಟವರ್ಗಳ ನೋಂದಣಿ ಮಾಡಬೇಕು. ಶಾಲಾ-ಕಾಲೇಜು, ಆಸ್ಪತ್ರೆ, ದೇವಾಲಯಗಳ 50 ಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್ ಟವರುಗಳಿದ್ದರೆ ತೆರವು ಮಾಡಬೇಕು. ಮನೆಗೆ ಫೌಂಡೇಷನ್ ನಿರ್ಮಿಸಿ ನಂತರ ಟವರ್ಗೆ ಅನುಮತಿ ಕೊಡುವುದು ಹೀಗೆ ಮುಂದಿನ ಮೂರು ತಿಂಗಳಿನಲ್ಲಿ ಹಂತ ಹಂತವಾಗಿ ಯೋಜನೆ ಜಾರಿಗೊಳಿಸಲಾಗುತ್ತದೆ ಎಂದರು.
ಎಲ್ಲಿಯೇ ಮೊಬೈಲ್ ಟವರ್ ನಿರ್ಮಿಸಬೇಕು ಎಂದರೂ ಕಟ್ಟಡ ಯೋಜನಾ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ನಿಯಮ ಪಾಲನೆ ಮಾಡದೇ ಇದ್ದರೆ ಸಾರ್ವಜನಿಕರು ಟವರ್ ನಿರ್ಮಾಣ ತಡೆಯಲು ಅಧಿಕಾರ ಹೊಂದಿರುತ್ತಾರೆ. ನಗರಾಭಿವೃದ್ಧಿ ಇಲಾಖೆ ಕೂಡ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಲಿದೆ. ನಿಯಮ ಪಾಲನೆ ಮಾಡದೇ ಇದ್ದಲ್ಲಿ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.