ಬೆಂಗಳೂರು : ಹೊಸ ಶಿಕ್ಷಣ ನೀತಿ ಮೇಲೆ ಬಹಳಷ್ಟು ವಿಶ್ವಾಸ ಇದೆ. ಯಾಕೆಂದರೆ, ಹೊಸ ಶಿಕ್ಷಣ ನೀತಿ ಕರ್ನಾಟಕದಲ್ಲಿ ತಯಾರಾಗಿದೆ. ಇದರ ಸಮಿತಿ ಸದಸ್ಯರು, ಅಧ್ಯಕ್ಷರು ಕರ್ನಾಟಕದವರೇ ಆಗಿದ್ದಾರೆ. ದೇಶಕ್ಕೆ ಕರ್ನಾಟಕದಿಂದ ಒಂದು ಕೊಡುಗೆ ಸಿಕ್ಕಿದಂತಾಗುತ್ತದೆ. ಇದು ನಮ್ಮ ಹೆಮ್ಮೆಯ ವಿಚಾರ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.
ಸೇಂಟ್ ಜೋಸೆಫ್ ಕಾಲೇಜ್ ಸಿಇಟಿ ಕೇಂದ್ರಕ್ಕೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಡಿಸಿಎಂ, ಹೊಸ ಶಿಕ್ಷಣ ನೀತಿ ದೇಶದ ದಿಕ್ಸೂಚಿಯನ್ನೇ ಬದಲಿಸಿ, ಹೊಸತನವನ್ನು ಇಡೀ ವಿಶ್ವಕ್ಕೆ ಹರಡಿ ನಮ್ಮ ದೇಶ ಜ್ಞಾನದ ಕೇಂದ್ರವಾಗಲಿದೆ. ಆರ್ಥಿಕ ಶಿಕ್ಷಣದ ಜೊತೆ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ಶಿಕ್ಷಣ ನೀಡುವಲ್ಲಿ ಹೊಸ ಶಿಕ್ಷಣ ನೀತಿ ನೆರವಾಗಲಿದೆ. ಇನ್ನು ಹೊಸ ಶಿಕ್ಷಣ ನೀತಿ ಜಾರಿಗೆ ತರಲು ಆರ್ಥಿಕತೆಗೆ ಒತ್ತು ನೀಡಿ, ಕಾನೂನಿನಲ್ಲಿ ಸಾಕಷ್ಟು ತಿದ್ದುಪಡಿ ತರಬೇಕಾಗುತ್ತದೆ. ಇದಕ್ಕೆ ಎಲ್ಲಾ ರಾಜ್ಯಗಳು ತಯಾರಾಗಬೇಕು ಎಂದರು.
ನಮ್ಮ ದೇಶದ ಸಂಪತ್ತಾದ ಮಾನವ ಸಂಪನ್ಮೂಲಕ್ಕೆ ಶಕ್ತಿ ತುಂಬುವ ಮೂಲಕ ದೇಶಕ್ಕೆ ಹೊಸ ಆಯಾಮ ತಂದು ಕೊಡುವಲ್ಲಿ ಹೊಸ ಶಿಕ್ಷಣ ನೀತಿ ನೆರವಾಗಲಿದೆ. ನಾನು ಉನ್ನತ ಶಿಕ್ಷಣ ಸಚಿವರಾಗಿರುವ ಸಂದರ್ಭದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೆ ತರುವ ಭಾಗ್ಯ ಸಿಕ್ಕಿದೆ. ಇನ್ನು ಹೊಸ ಶಿಕ್ಷಣ ನೀತಿ ಜಾರಿಗೆ ತರುವ ನಿಟ್ಟಿನಲ್ಲಿ ಈಗಾಗಲೇ ಮೂರು ತಿಂಗಳ ಹಿಂದೆಯೇ ರಾಜ್ಯದಲ್ಲಿ ಎಸ್ ವಿ ರಂಗನಾಥ್ ಅವರ ಅಧ್ಯಕ್ಷತೆಯಲ್ಲಿ ಟಾಸ್ಕ್‌ಪೋರ್ಸ್ ಸಮಿತಿ ಮಾಡಲಾಗಿದೆ. ಅಗಸ್ಟ್ 16ಕ್ಕೆ ಆ ಸಮಿತಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ.
ಆ ವರದಿಯನ್ನು ಕಾರ್ಯರೂಪಕ್ಕೆ ತರಲು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಾನು ಸುರೇಶ್‌ಕುಮಾರ್ ಅವರು ಎಲ್ಲಾ ರೀತಿಯಲ್ಲೂ ಕೆಲಸ ಮಾಡುತ್ತೇವೆ. ಒಂದು ವೇಳೆ ಈ ವರ್ಷವೇ ಹೊಸ ಶಿಕ್ಷಣ ನೀತಿ ಜಾರಿಗೆ ತರಲು ಅವಕಾಶ ಸಿಕ್ಕಿದರೆ ಜಾರಿಗೆ ತರಲು ಪ್ರಯತ್ನ ಮಾಡುತ್ತೇವೆ. ಹೊಸ ಶಿಕ್ಷಣ ನೀತಿ ಜಾರಿಗೆ ತರುವ ನಿಟ್ಟಿನಲ್ಲಿ ಕರ್ನಾಟಕವೇ ಮಾದರಿ ಆಗುವಂತೆ ನೀತಿಯನ್ನು ಜಾರಿಗೆ ತರುತ್ತೇವೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿದರು.