ಬೆಂಗಳೂರು: ನಾಳೆಯಿಂದ ರಾಜ್ಯದಲ್ಲಿ ಟಫ್ ರೂಲ್ಸ್ ಬಹುತೇಕ ಖಚಿತವಾಗಿದ್ದು, ನೈಟ್ ಕರ್ಫ್ಯೂ ಸಮಯದಲ್ಲಿ ಬದಲಾವಣೆ, ವೀಕೆಂಡ್ ಕರ್ಫ್ಯೂ ಜಾರಿ ಸಾಧ್ಯತೆ ಇದೆ. ವಾಣಿಜ್ಯ ಚಟುವಟಿಕೆಗೆ ಬ್ರೇಕ್ ಹಾಕದೇ ಕೆಲ ನಿರ್ಬಂಧ ವಿಧಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಓದಿ: ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ: ಬೆಡ್ ಕೊರತೆ ನೀಗಿಸಲು ಇರುವ ಉಪಾಯವೇನು?
ರಾಜ್ಯಪಾಲ ವಜುಭಾಯ್ ವಾಲಾ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ನಾಯಕರ ಸಭೆಯಲ್ಲಿ ಕೊರೊನಾ ನಿಯಂತ್ರಣ ಕುರಿತು ಮಹತ್ವದ ತೀರ್ಮಾನಗಳನ್ನು ಕೈಗೊಂಡಿದ್ದು, ಇಂದು ರಾತ್ರಿಯೇ ಟಫ್ ರೂಲ್ಸ್ ಒಳಗೊಂಡ ಮಾರ್ಗಸೂಚಿ ಬಿಡುಗಡೆಯಾಗಲಿದೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.
ಸರ್ವಪಕ್ಷ ಸಭೆ ಮುಗಿಯುತ್ತಿದ್ದಂತೆ ಅಧಿಕಾರಿಗಳು ಹೊಸ ಮಾರ್ಗಸೂಚಿ ಸಿದ್ದಪಡಿಸುತ್ತಿದ್ದಾರೆ. ಬಹುತೇಕ ಮಾರ್ಗಸೂಚಿ ಅಂತಿಮಗೊಂಡಿದ್ದು, ಕೆಲ ಸಣ್ಣಪುಟ್ಟ ಬದಲಾವಣೆ ಮಾಡಲಾಗುತ್ತಿದೆ. ಅಧಿಕಾರಿಗಳಿಂದ ಮಾರ್ಗಸೂಚಿ ಅಂತಿಮಗೊಳ್ಳುತ್ತಿದ್ದಂತೆ ಸಿಎಂ ಒಪ್ಪಿಗೆ ಪಡೆದು ಇಂದು ರಾತ್ರಿಯೇ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ನೂತನ ಮಾರ್ಗಸೂಚಿ ಹೊರಡಿಸಲಿದ್ದಾರೆ.
ಲಾಕ್‌ಡೌನ್ ಮತ್ತು ಸೆಮಿ ಲಾಕ್‌ಡೌನ್ ಬಗ್ಗೆ ಆಂತರಿಕ ಸಭೆಯಲ್ಲಿ ಚರ್ಚೆ ನಡೆದಿದ್ದು, ಸಂಪೂರ್ಣ ಲಾಕ್‌ಡೌನ್ ಗೆ ಸರ್ಕಾರ ಸಂಪೂರ್ಣ ನಿರಾಕರಣೆ ಮಾಡಿದೆ. ಹಾಗಾಗಿ ಸೆಮಿ ಲಾಕ್‌ಡೌನ್ ಬಹುತೇಕ ಫಿಕ್ಸ್ ಆಗಿದೆ ಎನ್ನಲಾಗುತ್ತಿದೆ.
ಸಧ್ಯ ಇರುವ ನೈಟ್ ಕರ್ಫ್ಯೂ ಸಮಯವನ್ನು ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆವರೆಗಿನ ಬದಲು, ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಗೆ ಬದಲಾಯಿಸಲಾಗುತ್ತದೆ. ನಂತರ ಕೆಲ ದಿನಗಳ ಬಳಿಕ ಅದನ್ನು ರಾತ್ರಿ 8 ಗಂಟೆಗೆ ಇಳಿಕೆ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ರಾಜ್ಯದಲ್ಲಿ ಲಾಕ್‌ಡೌನ್ ನಿಂದ ಆರ್ಥಿಕ ಚಟುವಟಿಕೆಗೆ ತೊಂದರೆಯಾಗುವ ಕಾರಣ, ಆರ್ಥಿಕ ಚಟುವಟಿಕೆಗೆ ತೊಂದರೆಯಾಗದಂತೆ ನೋಡಿಕೊಂಡು ಕೆಲ ನಿರ್ಬಂಧ ವಿಧಿಸಲಾಗುತ್ತದೆ. ಬೆಂಗಳೂರು ಸೇರಿ ಕೆಲವು ನಗರಗಳಿಗೆ ಕಠಿಣ ನಿಯಮ ಅನ್ವಯವಾಗುವಂತೆ ಜಾರಿಗೊಳಿಸಲಾಗುತ್ತದೆ. ಕಠಿಣ ನಿರ್ಧಾರಗಳ ಜೊತೆ ಕೆಲವೊಂದು ಚಟುವಟಿಕೆಗಳನ್ನು ಬಂದ್ ಮಾಡಲಾಗುತ್ತದೆ ಎನ್ನಲಾಗಿದೆ.
ಸಧ್ಯ ಟಫ್ ರೂಲ್ಸ್ ಒಳಗೊಂಡ ನೂತನ ಮಾರ್ಗಸೂಚಿ ಸಿದ್ದಗೊಂಡಿದ್ದು, ಸಿಎಂ ಯಡಿಯೂರಪ್ಪ ಒಪ್ಪಿಗೆ ನೀಡುತ್ತಿದ್ದಂತೆ ಇಂದು ರಾತ್ರಿಯೇ ಅಧಿಕೃತವಾಗಿ ಆದೇಶದ ರೂಪದಲ್ಲಿ ಹೊರಬರಲಿದೆ ಎಂದು ತಿಳಿದು ಬಂದಿದೆ.