ಬೆಂಗಳೂರು: ಸಂಬಳ ಕಡಿಮೆ ಅಂತ ನೇಪಾಳಿಗಳನ್ನು ಮನೆ ಕೆಲಸಕ್ಕೆ ಇಟ್ಟುಕೊಂಡಿದ್ದೀರಾ? ಎರಡು ಸಾವಿರ ಸಂಬಳ ಜಾಸ್ತಿ ಆದರೂ ಪರವಾಗಿಲ್ಲ ಇನ್ನು ಮುಂದೆ ಸ್ಥಳೀಯರಿಗೆ ಕೆಲಸ ಕೊಡಿ. ಇಲ್ಲಾ ಅಂದ್ರೆ ನಿಮ್ಮ ಮನೆ ಗುಡಿಸಿ ಗುಂಡಾಂತರ ಮಾಡೋದು ಪಕ್ಕಾ.
ಹೌದು, ಮನೆ ಕೆಲಸದಾಕೆಯನ್ನ ನಂಬಿ ಕೋಟಿ ಕುಳವೊಂದು ಹೆಚ್ಚು ಕಡಿಮೆ 1 ಕೋಟಿ ಕಳೆದುಕೊಂಡಿದೆ. ಬಸವೇಶ್ವರ ನಗರದ ಗೃಹಲಕ್ಷ್ಮಿಲೇಔಟ್ನಲ್ಲಿ ಘಟನೆ ನಡೆದಿದೆ. ವಾಗೀಶ್ವರಿ ಗುರುಕುಮಾರ್ ಮನೆಯಲ್ಲಿ ಕಳೆದ ಎರಡು ತಿಂಗಳಿನಿಂದ ಕೆಲಸಕ್ಕಿದ್ದ ನೇಪಾಳಿ ಮಹಿಳೆ ಅನು ಮತ್ತು ಆಕೆಯ ಕುಟುಂಬದಿಂದ ಕೃತ್ಯ ನಡೆದಿದೆ.
ಗೃಹಲಕ್ಷ್ಮಿ ಬಡಾವಣೆಯ ನವಮಿ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ ಕುಟುಂಬ ಫೆ. 22ರಂದು ಬೆಳಗ್ಗೆ ಮನೆ ಬಾಗಿಲು ಹಾಕಿ ದೇವಸ್ಥಾನಕ್ಕೆ ತೆರಳಿತ್ತು. ಆದರೆ ಮನೆ ಕೀಯನ್ನು ಸೆಕ್ಯೂರಿಟಿ ಬಳಿ ಕೊಟ್ಟು ಕೆಲಸದಾಕೆ ಬಂದ್ರೆ ಕೀ ಕೊಡಲು ಹೇಳಿ ಹೋಗಿದ್ರು.
ಮನೆ ಕೆಲಸಕ್ಕೆ ಅಂತ ಬಂದ ಅನು ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಎದುರು ಮನೆಯಲ್ಲಿ ಸೆಕ್ಯೂರಿಟಿ ಕೆಲಸ ಮಾಡ್ತಿದ್ದ ಪತಿಗೆ ಮಾಹಿತಿ ಕೊಟ್ಟಿದ್ದಳು. ಪತಿ ಜೊತೆ ಇನ್ನಿಬ್ಬರು ಮನೆಗೆ ಬಂದು ಲಾಕರ್ ಒಡೆದು ಮನೆಯಲ್ಲಿದ್ದ ಸುಮಾರು 80 ಲಕ್ಷ ಮೌಲ್ಯದ ಚಿನ್ನವನ್ನು ಪ್ಯಾಕ್ ಮಾಡಿದ್ರು. ಇದೇ ಸಮಯಕ್ಕೆ ಮನೆ ಮಾಲಕಿ ವಾಗೀಶ್ವರಿ ಎಂಟ್ರಿ ಕೊಟ್ಟಿದ್ದಾಳೆ.
ಅನು ಕೆಲಸ ಮಾಡ್ತಿದ್ದಾಳೆ ಅಂತ ಅಂದುಕೊಂಡೇ ಮಾತ್ರೆ ನುಂಗಲು ಡೈನಿಂಗ್ ಟೇಬಲ್ ಬಳಿ ಹೋದಾಗ ನೇಪಾಳಿ ಗ್ಯಾಂಗ್ ವಾಗೀಶ್ವರಿ ಕೈಕಾಲು ಕಟ್ಟಿ ಬಾಯಿಗೆ ಪ್ಲಾಸ್ಟರ್ ಸುತ್ತಿ ಹಲ್ಲೆ ನಡೆಸಿ ಮತ್ತೊಂದು ಲಾಕರ್ ಕೀ ಓಪನ್ ಮಾಡಿಸಿ ಎಂಟು ಲಕ್ಷ ನಗದನ್ನು ದೋಚಿ ಪರಾರಿಯಾಗಿದೆ.
ಸದ್ಯ ಆರೋಪಿಗಳು ಚಿನ್ನದ ಸಮೇತ ಕಾರ್ ಹತ್ತೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಕಲಿ ನಂಬರ್ ಪ್ಲೇಟ್ ಬಳಸಿದ ಕಾರಿನಲ್ಲಿ ಎಸ್ಕೇಪ್ ಆಗಿದ್ದಾರೆ. ಘಟನೆ ಸಂಬಂಧ ಬಸವೇಶ್ವರನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.