ಬೆಂಗಳೂರು: ಮುಚ್ಚುವ ಹಂತಕ್ಕೆ ತಲುಪಿರುವ ನಮ್ಮ ರಾಜ್ಯದ ಪ್ರತಿಷ್ಠಿತ ಕಬ್ಬಿಣ ಕಾರ್ಖಾನೆ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ ಮುಚ್ಚದಂತೆ ಮುಂದುವರಿಸಲು ಏನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ. ನಾವು ಪ್ರಧಾನಮಂತ್ರಿ, ಕೇಂದ್ರ ಗೃಹ ಸಚಿವರು, ಕೈಗಾರಿಕೆ ಸಚಿವರ ಜೊತೆ ಮಾತನಾಡಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾರ್ಖಾನೆ ಮುಚ್ಚುವ ಪ್ರಕ್ರಿಯೆ ಶುರುವಾಗಿದೆ. ಹಾಗಂತ ಮುಚ್ಚೇ ಹೋಯ್ತು ಅಂತಲ್ಲ. ಕೆಲವು ಪ್ರಕ್ರಿಯೆ ಶುರುವಾಗಿದೆ ಅಷ್ಟೇ. ಕೇಂದ್ರ ಸರ್ಕಾರದ ಜೊತೆ ವಿಶೇಷವಾಗಿ ಮಾತನಾಡುತ್ತಿದ್ದೇವೆ. ನಿನ್ನೆ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಕಾರ್ಖಾನೆ ಮುಚ್ಚುವ ಪ್ರೊಸೆಸ್ ಸ್ಟಾರ್ಟ್ ಆಗಿದೆ ಅಂತ ಹೇಳಿದ್ದಾರೆ. ಆದ್ರೆ ನಮ್ಮ ಯಡಿಯೂರಪ್ಪನವರು ಹಾಗೂ ಎಂಪಿಯವರು ಸಹ ವಿಶೇಷವಾಗಿ ಆದ್ಯತೆ ಕೊಟ್ಟು ಈ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಿದರು.
ಕಾರ್ಖಾನೆ ಮುಚ್ಚದಂತೆ ಪ್ರಯತ್ನ ಮಾಡ್ತೇವಿ ಎಂದ ಗೃಹ ಸಚಿವರು: ಕಳೆದ ವಾರ ಸಿಎಂ ಶಿವಮೊಗ್ಗದಲ್ಲೂ ಸಹ ಕಾರ್ಖಾನೆ ಮುಚ್ಚಲು ಬಿಡೋದಿಲ್ಲ. ಇದನ್ನು ನಾವು ಉಳಿಸಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ. ಕಾರ್ಖಾನೆಯನ್ನು ಖಾಸಗೀಕರಣ ಮಾಡಬೇಕೋ ಅಥಾವ ಸರ್ಕಾರ ನಡೆಸಬೇಕೋ ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಲೋಕಸಭೆಯಲ್ಲಿ ನಿನ್ನೆಯ ಸ್ಟೇಟಸ್ ಏನಿದೆಯೋ ಅದನ್ನು ಕೊಟ್ಟಿದ್ದಾರೆ. ನನಗೂ ಇದರ ಬಗ್ಗೆ ವಿಷಾದವಿದೆ ಎಂದರು. ಈ ಕಾರ್ಖಾನೆ ಮುಚ್ಚಬಾರದು. ಯಾವುದಾದರೂ ರೀತಿಯಲ್ಲಿ ನಡೆಯಬೇಕು. ನಮ್ಮ ರಾಜ್ಯದ ಹೆಮ್ಮೆಯ ಕಾರ್ಖಾನೆ ಇದು. ವಿಶ್ವೇಶ್ವರಯ್ಯನವರು ಪ್ರಾರಂಭ ಮಾಡಿದ ಕಾರ್ಖಾನೆ ಅದು. ನಮ್ಮ ಮೈಸೂರು ಮಹರಾಜರು ಮಾಡಿದ ಉದ್ಯಮ. ಈ ಕಾರ್ಖಾನೆ ಪರವಾಗಿ ನಮ್ಮ ಸರ್ಕಾರವಿದೆ ಎಂದು ತಿಳಿಸಿದರು.
ನಿನ್ನೆ ಕೇಂದ್ರ ಸರ್ಕಾರ ಬಜೆಟ್ ಅಧಿವೇಶನದಲ್ಲಿ ವಿಐಎಸ್ಎಲ್ ಕಾರ್ಖಾನೆಯನ್ನು ಮುಚ್ಚುವ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿತ್ತು. ಕೇಂದ್ರ ವಿತ್ತ ಖಾತೆ ರಾಜ್ಯ ಸಚಿವ ಭಾಗವತ್ ಕರಾಡ್ ಲೋಕಸಭೆಯಲ್ಲಿ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದರು. ಸರ್ಕಾರಿ ಸ್ವಾಮ್ಯದ ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ನಷ್ಟದ ಕಾರಣದಿಂದ ಅಧಿಕೃತವಾಗಿ ಮುಚ್ಚಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಕಾರ್ಖಾನೆಯನ್ನು ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ ಮುಚ್ಚುವ ಪ್ರಕ್ರಿಯೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ವಿತ್ತ ಸಚಿವಾಲಯ ಲೋಕಸಭೆಗೆ ತಿಳಿಸಿದೆ.
ಕಂಪನಿ ಮುಚ್ಚದಂತೆ ದೇವೇಗೌಡರು ಪ್ರಧಾನಿಗೆ ಪತ್ರ ಬರೆದಿದ್ದರು: ಇದನ್ನು ವಿರೋಧಿಸಿ ಕಾರ್ಖಾನೆ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತ ಪ್ರತಿಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಯಾವುದೇ ಕಾರಣಕ್ಕೂ ಕಾರ್ಖಾನೆ ಮುಚ್ಚಬಾರದು ಎಂದು ಆಗ್ರಹಿಸುತ್ತಿದ್ದಾರೆ. ಇತ್ತ ದೇವೇಗೌಡರು ಪ್ರಧಾನಿ ಮೋದಿಗೆ ಪತ್ರ ಬರೆದು ಕಾರ್ಖಾನೆ ಮುಚ್ಚದಂತೆ ಮನವಿ ಮಾಡಿದ್ದರು.
ಅದರೊಂದಿಗೆ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ ಸಲಹೆಯ ಮೇರೆಗೆ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ್ದ 105 ವರ್ಷಗಳ ಹಳೆಯ ಕಾರ್ಖಾನೆಯ ಯುಗಾಂತ್ಯ ಆಗಲಿದೆ. ನಷ್ಟದಲ್ಲಿರುವ ಭದ್ರಾವತಿಯ ಉಕ್ಕು ಕಾರ್ಖಾನೆ ಖಾಸಗಿಯವರಿಗೆ ಮಾರಾಟ ಮಾಡಲು 2016ರಲ್ಲಿ ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಅದರಂತೆ 2019ರಲ್ಲಿ ಬಿಡ್ ಆಹ್ವಾನಿಸಿತ್ತು. ಆದರೆ, ಬಿಡ್ ಮೂಲಕ ಆಸಕ್ತಿ ತೋರಿದವರು ಖರೀದಿಗೆ ಆಸಕ್ತಿ ತೋರಲಿಲ್ಲ. ಈ ಹಿನ್ನಲೆ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಖಾಸಗೀಕರಣ ಪ್ರಕ್ರಿಯೆ ಕೈಬಿಡಲು ನಿರ್ಧರಿಸಿತ್ತು.
ಸಿಎಂ ಸಹ ಮಾತುಕತೆ ನಡೆಸುವುದಾಗಿ ಹೇಳಿದ್ದರು: ಫೆ. 8 ರಂದು ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಕಾರ್ಖಾನೆ ಪುನಾರಂಭಿಸಲು ಕೇಂದ್ರದ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದ್ದರು. ಆದರೆ ಕಾರ್ಖಾನೆಯನ್ನು ಮುಚ್ಚುವ ಬಗ್ಗೆ ನಿನ್ನೆ ಸಂಸತ್ತಿನಲ್ಲಿ ಕೇಂದ್ರದ ಅಂತಿಮ ನಿರ್ಧಾರ ಹೊರ ಬಿದ್ದಿದೆ. ಕೇಂದ್ರ ವಿತ್ತ ಖಾತೆ ರಾಜ್ಯ ಸಚಿವ ಭಾಗವತ್ ಕರಾಡ್, 'ಬಿಡ್ ಸಲ್ಲಿಸುವ ಮೂಲಕ ಆಸಕ್ತಿ ತೋರಿದವರು ಖರೀದಿಗೆ ಆಸಕ್ತಿ ತೋರುತ್ತಿಲ್ಲ. ಕಾರ್ಖಾನೆಯಲ್ಲಿನ ಯಂತ್ರಗಳು ಹಾಳಾಗಿವೆ. ಅವುಗಳ ಗಾತ್ರ ಸಾಕಷ್ಟಿಲ್ಲ. ನಿರಂತರವಾಗಿ ಕಾರ್ಖಾನೆ ನಷ್ಟದಲ್ಲಿದೆ ಹಾಗೂ ಬಹಳ ಹಿಂದೆಯೇ ಕುಲುಮೆಯನ್ನು ಮುಚ್ಚಲಾಗಿದೆ ಎಂಬ ಕಾರಣ ನೀಡುತ್ತಿದ್ದಾರೆ. ಹೀಗಾಗಿ ಕಾರ್ಖಾನೆ ಮುಚ್ಚಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದರು.
ಇದನ್ನೂ ಓದಿ: ಕರ್ನಾಟಕವೇ ಮಾಡೆಲ್, ನಮಗೆ ಯುಪಿ, ಗುಜರಾತ್ ಮಾಡೆಲ್ ಬೇಕಿಲ್ಲ, ರಾಜ್ಯಪಾಲರಿಂದ ಸರ್ಕಾರ ಬರೀ ಸುಳ್ಳು ಹೇಳಿಸಿದೆ: ಹರಿಪ್ರಸಾದ್