ಬೆಂಗಳೂರು: ದೇಶದಾದ್ಯಂತ ಇಂದು ವೈದ್ಯಕೀಯ ಮತ್ತು ದಂತ ವೈದ್ಯಕೀಯ ಹಾಗೂ ಆಯುಷ್ ಕೋರ್ಸ್ಗಳಿಗೆ ನಡೆಸುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET Exam) ನಡೆಯಲಿದೆ.
ಮಧ್ಯಾಹ್ನ 2 ಗಂಟೆಯಿಂದ ಸಂಜೆ 5ರ ವರೆಗೆ ಪರೀಕ್ಷೆ ನಡೆಯಲಿದೆ. ಒಟ್ಟು 201 ಪ್ರಮುಖ ನಗರಗಳ ಪೈಕಿ ಕರ್ನಾಟಕದ ಒಟ್ಟು 9 ನಗರಗಳಲ್ಲಿ ನೀಟ್ ಪರೀಕ್ಷೆ ಜರುಗಲಿದೆ. ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರಗಿ, ಹುಬ್ಬಳ್ಳಿ, ಮೈಸೂರು, ಮಂಗಳೂರು ಮತ್ತು ಉಡುಪಿಯಲ್ಲಿ ಪರೀಕ್ಷೆ ಆರಂಭವಾಗಲಿದೆ.
ನೀಟ್ ಪರೀಕ್ಷೆಗೆ 16 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಒಟ್ಟು 180 ಪ್ರಶ್ನೆಗಳಂತೆ, ಪ್ರತೀ ಪ್ರಶ್ನೆಗೆ 4 ಅಂಕ, ಒಟ್ಟು 720 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಪ್ರತಿ ಪ್ರಶ್ನೆಯ ತಪ್ಪು ಉತ್ತರಕ್ಕೆ ಒಂದು ನೆಗೆಟಿವ್ ಅಂಕ ಇರಲಿದೆ.
ಕೋವಿಡ್ ಸೋಂಕಿದ್ದರೆ ಪ್ರತ್ಯೇಕ ಕೊಠಡಿ
ಕೋವಿಡ್ ಸೋಂಕಿತರು ಸಹ ನೀಟ್ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದ್ದು, ಸೋಂಕಿನ ಲಕ್ಷಣ ಇರುವವರೆಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗುತ್ತದೆ. ಕೆಮ್ಮು, ಜ್ವರ, ನೆಗಡಿಯಂತಹ ಲಕ್ಷಣವಿರುವವರಿಗೆ ಕೋವಿಡ್ ಮಾರ್ಗಸೂಚಿಯಂತೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಮುಗಿಯುವವರೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಹ್ಯಾಂಡ್ ಸ್ಯಾನಿಟೈಸರ್ ಬಳಸುವಂತೆ ಸೂಚನೆ ನೀಡಲಾಗಿದೆ.
ನಗರದ ಆರ್ಮಿ ಪಬ್ಲಿಕ್ ಸ್ಕೂಲ್ನಲ್ಲಿ ನೀಟ್ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷಾ ಕೇಂದ್ರಕ್ಕೆ ಬೆಳಗ್ಗೆ 11 ರಿಂದ ದಾಖಲೆಗಳ ಪರಿಶೀಲನೆ ಪ್ರಾರಂಭವಾಗುವ ಕಾರಣಕ್ಕೆ ಅಭ್ಯರ್ಥಿಗಳು ಆಗಮಿಸಿದ್ದಾರೆ. ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ದಾಖಲೆ ಪರಿಶೀಲನಾ ಕಾರ್ಯ ನಡೆಯಲಿದೆ.
ಅಭ್ಯರ್ಥಿಗಳು ಅರ್ಧ ಗಂಟೆ ಮುಂಚಿತವಾಗಿ ಪರೀಕ್ಷಾ ಕೊಠಡಿಯೊಳಗೆ ಹಾಜರಿರಬೇಕಿದೆ. ಇನ್ನು ಪರೀಕ್ಷಾ ಕೇಂದ್ರದೊಳಗೆ ವಿದ್ಯಾರ್ಥಿಗಳು ಟೆಕ್ ಪೆನ್ ಕೊಂಡೊಯ್ಯುವಂತಿಲ್ಲ. ಬುಕ್/ನೋಟ್ ಬುಕ್ ಹಾಗೂ ವಾಚ್, ಕ್ಯಾಲ್ಕುಲೇಟರ್, ಮೊಬೈಲ್ ನಂತಹ ಎಲೆಕ್ಟ್ರಾನಿಕ್ ವಸ್ತು ನಿಷೇಧ ಮಾಡಲಾಗಿದೆ. ಹಾಗೇ ಪರ್ಸ್- ಹ್ಯಾಂಡ್ ಬ್ಯಾಗ್, ಪೆನ್ ಡ್ರೈವ್ ಸೇರಿದಂತೆ ಯಾವುದೇ ರೀತಿಯ ಆಭರಣ ಧರಿಸುವಂತಿಲ್ಲ.
ಓದಿ: ಸದನದಲ್ಲಿ ಚರ್ಚಿಸದೇ ಏಕಾಏಕಿ NEP ಜಾರಿಗೆ ತಂದಿರುವುದು ಸರಿಯಲ್ಲ: ಸತೀಶ್ ಜಾರಕಿಹೊಳಿ